ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಯೋಪಾಯ ಸರಸ್ವತಿ

೨೯೭

ಗಳಾದಾಗ ಯಾರಾದರೂ ದೊಡ್ಡ ಮನುಷ್ಯರನ್ನು ಆಶ್ರಯಿಸಿ ಸಾಹೇಬರಿಗೆ ಶಿಫಾರಸು ಹೇಳಿಸುವುದಿಲ್ಲವೇ ? ಕಲ್ಲೇಗೌಡ ದೊಡ್ಡ ಮನುಷ್ಯನಲ್ಲವೇ ?ಮುಖಂಡನಲ್ಲವೇ ? ಆತನೂ ಶಿಫಾರಸು ಮಾಡಲಿ ನಿಮ್ಮ ಬುದ್ಧಿಯನ್ನು ನೀವು ಉಪಯೋಗಿಸಿ, ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬಂತೆ, ನೆಂಟೂ ಉಳಿಯಬೇಕು ಗಂಟೂ ಉಳಿಯಬೇಕು ಎಂಬಂತೆ ಉಪಾಯಮಾಡಬೇಕಾಗಿತ್ತು. ನೋಡಿ ! ಜನರನ್ನು ಕಳೆದು ಕೊಳ್ಳಬಾರದು, ಎದುರು ಹಾಕಿಕೊಳ್ಳಬಾರದು. ಅಷ್ಟು ನಿಮಗೆ ಗೊತ್ತಾಗಲಿಲ್ಲ.'

'ಅವನು ತನ್ನ ಕಟ್ಟಡಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಾ ಇದ್ದ ; ರಿಪೇರಿ ಮಾತ್ರ ಮಾಡಿಕೊಡಲಿಲ್ಲ. ಯಾರು ಹೇಳಿದರೂ ಲಕ್ಷವೇ ಇಲ್ಲ. ಏನಾಗಿದೆ ಆ ಕಟ್ಟಡಕ್ಕೆ ? ದಿವಾನರಿಗೆ ಅಲ್ಲಿ ಅಟ್ ಹೊ೦ ಕೊಟ್ಟರೆ ಕುಣೀತಾ ಬಂದು ಕುಳಿತುಕೊಳ್ಳುತ್ತಾರೆ- ಎಂದು ಲಾಘವದಿಂದ ಮಾತನಾಡಿದ. ಅವನನ್ನು ದೊಡ್ಡ ಮನುಷ್ಯನೆಂದು ಹೇಳಬಹುದೇ ? ನಾನು ಮಾಡಿದ್ದಾದರೂ ಏನು ? ಮರ್ಯಾದೆಯಾಗಿ ಕಾಗದವನ್ನು ಬರೆದೆ ;ಜ್ಞಾಪಕ ಕೊಟ್ಟೆ. ಅಲ್ಲಿ ಪ್ಲೇಗ್ ಇಲಿ ಬಿತ್ತು ; ಡಿಸಿಸ್‌ಫೆಕ್ಷನ್ ಮಾಡಿಸುವುದಕ್ಕೆ ಆಗುವುದಿಲ್ಲ ಎಂದು ವೈಸ್ ಪ್ರೆಸಿಡೆಂಟ್ ಹೇಳಿದರು ; ಪಾಠಶಾಲೆಯನ್ನು ಮಿಡಲ್ ಸ್ಕೂಲು ಕಟ್ಟಡದಲ್ಲಿ ಮಾಡಿ ಎಂದು ಸಾಹೇಬರು ಆರ್ಡರ್ ಮಾಡಿದರು. ನನ್ನ ಮೇಲೆ ವೃಥಾ ದ್ವೇಷ ಆ ಕಲ್ಲೇಗೌಡನಿಗೆ ಬೆಳೆಯಿತು. '

'ನೀವು ಆ ಕಟ್ಟಡವನ್ನು ಖಾಲಿ ಮಾಡಬೇಕು ಎಂಬುವ ಹಟದಿಂದಲ್ಲವೇ ಕಾಗದ ಗೀಗದ ಬರೆದು ರಿಕಾರ್ಡು ಇಟ್ಟು ಕೊಂಡದ್ದು ! ಪ್ಲೇಗ್ ಇಲಿ ಬೀಳದೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ನಾನು ಮೊದಲೇ ಹೇಳಿದಂತೆ ಆತನನ್ನು ಸ್ನೇಹಭಾವದಿಂದ ಕಂಡು, ನಿಮ್ಮ ಯೋಗ್ಯತೆ, ವಿದ್ಯೆ, ಸಭ್ಯತೆ ಮೊದಲಾದುವು ಆತನಿಗೆ ತಿಳಿಯುವಂತೆ ವರ್ತಿಸಿದ್ದಿದ್ದರೆ ಆತನಿಗೂ ನಿಮ್ಮಲ್ಲಿ ಗೌರವ ಹುಟ್ಟುತ್ತಿತ್ತು ; ನೀವು ಆಗ ಒಂದು ಮಾತನ್ನುಹೇಳಿದ್ದರೆ ರೀಪೇರಿ ಮಾಡಿಕೊಡುತ್ತಿದ್ದ. ಒಂದು ವೇಳೆ ಮಾಡಿ ಕೊಡಲಿಲ್ಲ ಅನ್ನಿ. ನಿಮ್ಮ ಉಪಾಧ್ಯಾಯರ ಸಂಘದ ಸಭೆಗಳನ್ನು ಎಲ್ಲೆಲ್ಲೋ