ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಮಯೋಪಾಯ ಸರಸ್ವತಿ

೨೯೯

ಅವನೇನೋ ದುಷ್ಟ ಎಂದು ಇಟ್ಟು ಕೊಳ್ಳಿ. ಎರಡು ದಿನ ಅವನಿಗೆ ಹೆಡ್‌ಮೇಷ್ಟರ ಕೆಲಸ ಕೊಡಬೇಕಾಗಿತ್ತು ! ತಮ್ಮ ಮಕ್ಕಳನ್ನು ಪಾಠ ಶಾಲೆಗೆ ಸೇರಿಸದೇ ಹೋದಾಗ ಊರಿನ ಜನ ಗಲಾಟೆ ಎಬ್ಬಿಸುತ್ತಿದ್ದರು ; ಅವನ ಮೇಲೆ ಊರಿನ ಜನರೇ ದೂರು ಹೇಳುತ್ತಿದ್ದರು ; ಅವನನ್ನುಬೇಕಾದ ಹಾಗೆ ಅವರೇ ಬಯ್ಯುತ್ತಿದ್ದರು, ಆ ಕಷ್ಟಗಳನ್ನೂ , ನಿಮ್ಮ ಆರ್ಡರುಗಳ ಜೋರನ್ನೂ ಎರಡು ದಿನ ಅವನು ಅನುಭವಿಸಿದ್ದರೆ ಚೆನ್ನಾಗಿರುತ್ತಿತ್ತು ! ದಂಡನೆ ಮಾಡುವುದಕ್ಕೆ ಏನು ! ಸಾಹೇಬರುಗಳಿಗೆ ನೆಪಗಳು ಬೇಕಾದಷ್ಟು ಇದ್ದೇ ಇರುತ್ತವೆ. ಯಾವಾಗಲಾದರೂ ಮಾಡಬಹುದು. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂದು ಕೇಳಿಲ್ಲವೇ? ಆದರೂ ನಿಮ್ಮ ಇಲಾಖೆಯಂಥ ಕೆಟ್ಟ ಇಲಾಖೆ ಬೇರೆ ಇರಲಾರದು ! ನೀವೇ ಆಗಾಗ ಹೇಳುತ್ತಿದ್ದಿರಿ : ಕಟ್ಟಡಗಳಿಲ್ಲ, ಸರಿಯಾದ ಮೇಷ್ಟ್ರುಗಳಿಲ್ಲ, ಪಾಠೋಪಕರಣಗಳಿಲ್ಲ; ಮಕ್ಕಳನ್ನು ಕುರಿಗಳಂತೆ ತುಂಬುತ್ತಾರೆ ಯೋಗ್ಯತೆ ಇಲ್ಲದಿದ್ದರೂ ಪಾಸು ಮಾಡಿಸುತ್ತಾರೆ; ಮೇಲಿನ ಅಧಿಕಾರಿಗಳು ಬರಿ ಜಬರ್ದಸ್ತಿನವರು. ತಮಗೆ ಕನ್ನಡ ಏನೂ ಬರೆದಿದ್ದರೂ ವಿಧವೆಗೆ ಕೂಡ ಜುಲ್ಮಾನೆ ಹಾಕುತ್ತಾರೆ ; ಮೇಷ್ಟ್ರುಗಳನ್ನೆಲ್ಲ ಹುಚ್ಚು ಹುಚ್ಚಾಗಿ ದಂಡಿಸುತ್ತಾರೆ. ಉಪಾಧ್ಯಾಯರ ಸಭೆಗಳಲ್ಲಿ ಭಾಷಣ ಮಾಡುವಾಗ ನೀವೆಲ್ಲ ಗುರುಗಳು, ದೇಶೋದ್ಧಾರಕರು ; ಹೊಟ್ಟೆಗಿಲ್ಲದಿದ್ದರೇನು ? ಸಂಬಳವೇ ಮುಖ್ಯವಲ್ಲ ; ಸೇವೆಯೆ ಮುಖ್ಯ. ನಿಮಗೆ ಗೌರವದ ಕಾಣಿಕೆಯನ್ನು ದೇಶವೇ ಸಲ್ಲಿಸುತ್ತದೆ ಎಂದು ಮುಂತಾಗಿ ಹರಟುತ್ತಾರೆ- ಎಂದು ನೀವು ಹೇಳುತ್ತಿರಲ್ಲಿಲ್ಲವೆ ?'

'ಇತರ ಇಲಾಖೆಗಳು ಇರುವಹಾಗೆಯೇ ನಮ್ಮ ಇಲಾಖೆಯ ಇದೆ. ಮುಂದೆ ಪ್ರಜಾ ಸರ್ಕಾರ ಬಂದಾಗ ಹೆಚ್ಚಾಗಿ ಹಣ ಒದಗಿ ದಕ್ಷರಾದ ಸಿಬ್ಬಂದಿ ಒದಗಿ ಎಲ್ಲವೂ ಸರಿಹೋಗುತ್ತದೆ. ನಾನಂತೂ ಮೇಷ್ಟರುಗಳನ್ನು ಗೌರವದಿಂದಲೂ ವಿಶ್ವಾಸದಿಂದಲೂ ನಡೆಸಿಕೊಂಡು ಬಂದೆ. ಅವರ ಗೌರವವನ್ನೂ ವಿಶ್ವಾಸವನ್ನೂ ಸಂಪಾದಿಸಿ ಕೊಂಡೆ. ಆದನ್ನಾದರೂ ನೀನು ಮೆಚ್ಚುತ್ತೀಯೋ ಇಲ್ಲವೋ ?'