ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೨

ರಂಗಣ್ಣನ ಕನಸಿನ ದಿನಗಳು

ಕಾಗದಗಳನ್ನೂ ಜೊತೆಗೆ ತರುವಂತೆ ರಂಗಣ್ಣ ಹೇಳಿಕಳಿಸಿ ತಾನು ಹೊರಡಲು ಉಡುಪಿನ ಸಜ್ಜು ಮಾಡಿಕೊಂಡನು. ಸರಿಗೆಯ ಪಂಚೆಯನ್ನುಟ್ಟು ಕೊಂಡು, ಸರ್ಜುಕೊಟ್ಟು, ಶಲ್ಯ ಮತ್ತು ರುಮಾಲುಗಳನ್ನು ಧರಿಸಿಕೊಂಡನು. ಶಂಕರಪ್ಪನ ಕೈಗೆ ಒಂದು ಶುಭವಾದ ಟವಲ್ಲನ್ನು ಕೊಟ್ಟು ತನ್ನ ಕೈ ಬೆತ್ತ ಹಿಡಿದುಕೊಂಡು ಹೊರಟನು. ಕುದುರೆಯ ಗಾಡಿಯಾದ್ದರಿಂದ ಪ್ರಯಾಣ ಬೇಜಾರು ಹಿಡಿಸಲಿಲ್ಲ. ಬೆಳಗ್ಗೆ ಒಂಬತ್ತು ಗಂಟೆಗೆ ಹೊರಟವರು ಹತ್ತೂ ಕಾಲು ಗಂಟೆಗೆ ಗವಿಮಠವನ್ನು ಸೇರಿದರು.

ಮಠದ ಸನ್ನಿವೇಶ ಬಹಳ ರಮಣೀಯವಾಗಿತ್ತು. ಮೂರು ಕಡೆ ಬೆಟ್ಟ ಗಳು ಒಂದು ಕಡೆ ಬಯಲು ; ಬೆಟ್ಟಗಳ ಮೇಲೆ ಕುರುಚಲು ಕಾಡು; ಅಲ್ಲಲ್ಲಿ ಝರಿಗಳು ; ಬಯಲಲ್ಲಿ ಸೀಳು ಹೊಳೆಗಳು ; ಪೈರು ಪಚ್ಚೆ . ಬೆಟ್ಟದ ಬುಡದಲ್ಲಿ ಕೆಲವು ಸತ್ರಗಳು, ಎರಡು ಮೂರು ದೇವಾಲಯಗಳು; ಬೆಟ್ಟದ ಮೇಲೊಂದು ದೇವಾಲಯ, ಮಠದ ಕಟ್ಟಡ ಬೆಟ್ಟದ ಬುಡದಲ್ಲಿಯೇ ಇತ್ತು. ಸಾಮಾನ್ಯವಾಗಿ ಅಲ್ಲಿ ಪ್ರಶಾಂತ ವಾತಾವರಣವಿರುತಿತ್ತು, ಆದರೆ ಈಚೆಗೆ ನೂತನ ಸ್ವಾಮಿಗಳ ಪಟ್ಟಬಂಧ ಮಹೋತ್ಸವ ನಡೆದಿದ್ದುದರಿಂದ, ಅದರ ಅವಶಿಷ್ಟಗಳು ಇನ್ನೂ ಇದ್ದು ವು ; ಆ ಮಹೋತೃವಕ್ಕೆ ಬಂದಿದ್ದವರಲ್ಲಿ ಕೆಲವರು ಇನ್ನೂ ಸ್ಥಳದಲ್ಲಿಯೇ ಇದ್ದರು. ಮಠವನ್ನು ಸಮೀಪಿಸುತ್ತಿದ್ದಾಗ ಅಮಲ್ದಾರರು, ಪೊಲೀಸ್ ಇನ್ಸ್ಪೆಕ್ಟರು, ಶಿರಸ್ತೆದಾರರು, ಮುನಸೀಫರು, ಮ್ಯಾಜಿಸ್ಟ್ರೇಟರು ಆದಿಯಾಗಿ ಹಲವರು ಸರಕಾರಿ ಅಧಿಕಾರಿಗಳು ಸಹ ಅತಿಥಿಗಳಾಗಿ ಬಂದಿರುವುದು ರಂಗಣ್ಣನಿಗೆ ತಿಳಿಯಿತು. ಜನಾರ್ದನಪುರದಿಂದ ಅಡಿಗೆಯವರನ್ನು ಕರೆಸಿ ಒಂದು ಪತ್ರದಲ್ಲಿ ಅಡಿಗೆಯ ಏರ್ಪಾಟನ್ನು ಇಟ್ಟಿದ್ದರು. ರಂಗಣ್ಣನಿಗೆ ಬೇರೆ ಒಂದು ಸತ್ರದಲ್ಲಿ ಮಹಡಿಯ ಮೇಲೆ ದೊಡ್ಡದೊಂದು ಕೊಟಡಿ ಬೀಡಾರವಾಗಿ ಏರ್ಪಟ್ಟಿತ್ತು. ಮೊದಲು ಆ ಬೀಡಾರವನ್ನು ನೋಡೋಣವೆಂದು ಹೊಗುತ್ತಿದ್ದಾಗ ಅಮಲ್ದಾರರೂ ಮುನಸೀಫರೂ ಎದುರು ಬಿದ್ದರು. ಒಬ್ಬರಿಗೊಬ್ಬರು ಕುಶಲ ಪ್ರಶ್ನೆಗಳನ್ನು ಮಾಡಿ ಕೈಗಳನ್ನು ಕುಲುಕಿ ಆದಮೇಲೆ,