ಪುಟ:ರಂಗಣ್ಣನ ಕನಸಿನ ದಿನಗಳು.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೦೩

'ರಂಗಣ್ಣನವರೇ! ನಿಮ್ಮ ನೆಪದಲ್ಲಿ ನಮಗೂ ಈ ದಿನ ಔತಣ. ಮುಖ್ಯ ಅತಿಥಿಗಳಾಗಿ ನೀವು ಬಂದಿದ್ದೀರಿ! ನಿಮ್ಮ ಪರಿವಾರವಾಗಿ ನಾವು ಬಂದಿದ್ದೆವೆ !' ಎಂದು ನಗುತ್ತಾ ಅಮಲ್ದಾರರು ಹೇಳಿದರು.

'ತಾಲ್ಲೂಕಿನ ಧಣಿಗಳು ತಾವು ! ತಾವು ಮುಂದಿರಬೇಕು, ತಮ್ಮ ಹಿಂದೆ ನಾವಿರಬೇಕು !' ಎಂದು ರಂಗಣ್ಣನು ನಗುತ್ತಾ ಹೇಳಿದನು.

ಹೀಗೆ ಮಾತುಕತೆಗಳನ್ನಾಡಿ ರಂಗಣ್ಣ ತನ್ನ ಕೊಟಡಿಗೆ ಹೋದನು. ನೆಲಕ್ಕೆ ಜಮಖಾನವನ್ನು ಹಾಸಿ ದಿಂಬುಗಳನ್ನು ಗೋಡೆಗೆ ಒರಗಿಸಿದ್ದರು. ಒಂದು ಕಡೆ ಒಂದು ಮೇಜು ಮತ್ತು ಎರಡು ಕುರ್ಚಿಗಳಿದ್ದುವು. ಹಿಂದೆಯೇ ಬಂದ ಪಾರು ಪತ್ಯಗಾರನು 'ಸ್ವಾಮಿಯವರು ಇಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ಶ್ರೀಗಳವರಿಗೆ ತಾವು ಬಂದಿರುವ ಸಮಾಚಾರವನ್ನು ತಿಳಿಸಿ ಮತ್ತೆ ಬರುತ್ತೇನೆ' ಎಂದು ಹೇಳಿ ಹೊರಟುಹೋದನು.

ರಂಗಣ್ಣ ದಿಂಬಿಗೆ ಒರಗಿಕೊಂಡು, 'ನೋಡಿದಿರಾ ಶಂಕರಪ್ಪ ! ಹೀಗೆ ಆಗುವುದೆಂದು ಕನಸಿನಲ್ಲಾದರೂ ಕಂಡಿದ್ದೀರಾ ? ಹಿಂದಿನ ಆ ಉಗ್ರಪ್ಪನೆಲ್ಲಿ! ಇಂದಿನ ಶಾಂತವೀರಸ್ವಾಮಿಗಳೆಲ್ಲಿ! ನಾನು ಮುಖ್ಯ ಅತಿಥಿಯಾಗಿ ಇಲ್ಲಿಗೆ ಬಂದಿರುವುದು ಒಂದು ಸೋಜಿಗವಲ್ಲವೆ!' ಎಂದು ಹೇಳಿದನು.

'ಹೌದು ಸ್ವಾಮಿ! ಕಣ್ಣಿಂದ ಸಾಕ್ಷಾತ್ತಾಗಿ ನೋಡಿದರೂ ನಂಬಲಾಗದ ಘಟನೆ!'

ಶಂಕರಪ್ಪನೂ ಆಶ್ಚರ್ಯಭರಿತನಾಗಿ ಉಗ್ರಪ್ಪನ ಪೂರ್ವಾಶ್ರಮದ ಕಥೆಗಳನ್ನು ಹೇಳುತ್ತಿದ್ದನು. ರಂಗಣ್ಣ, 'ಶಂಕರಪ್ಪ ! ನೀವು ತಂದಿರುವ ಪೆನ್ಷನ್ ಕಾಗದಗಳಿಗೆ ಸ್ವಾಮಿಗಳ ರುಜು ಮಾಡಿಸೋಣ, ಎಂತಿದ್ದರೂ ಇಪ್ಪತೈದು ವರ್ಷ ಸರ್ವಿಸ್ ಆಗಿದೆ. ಆ ಸಂಸಾರ ಪೋಷಣೆಗೆ ಒಂದಿಷ್ಟು ಪೆನ್ಷನ್ ಒದಗಲಿ, ನಾನು ಖುದ್ದಾಗಿ ಶಿಫಾರಸು ಮಾಡಿ ಕಳಿಸಿಕೊಡುತ್ತೇನೆ' ಎಂದನು. ಪಾರುಪತ್ಯಗಾರನು ಮತ್ತೆ ಬಂದನು. ಅವನ ಜೊತೆಯಲ್ಲಿ ಮಾಣಿಯೊಬ್ಬನು ಬೆಳ್ಳಿಯ ತಟ್ಟೆಗಳಲ್ಲಿ ಸಜ್ಜಿಗೆ ಮತ್ತು