ಪುಟ:ರಂಗಣ್ಣನ ಕನಸಿನ ದಿನಗಳು.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೨

ರಂಗಣ್ಣನ ಕನಸಿನ ದಿನಗಳು

ಸಾಯಂಕಾಲ ನಾಲ್ಕು ಗಂಟೆಗೆ ಮೊದಲನೆಯ ತೊಟ್ಟಿಯಲ್ಲಿ ಸಭೆ ಸೇರಿತು. ತಾಲ್ಲೂಕಿನ ಮುಖ್ಯಾಧಿಕಾರಿಗಳೂ ಆ ಕ್ಷೇತ್ರವಾಸಿಗಳೂ, ಇತರರೂ ಆ ಸಭೆಯಲ್ಲಿ ನೆರೆದಿದ್ದರು. ಸ್ವಾಮಿಗಳ ಬಲಗಡೆ ರಂಗಣ್ಣ ಕುಳಿತಿದ್ದನು ; ಎಡಗಡೆ ಅಮಲ್ದಾರರು ಕುಳಿತಿದ್ದರು, ಮ್ಯಾಜಿಸ್ಟ್ರೇಟರು ರಂಗಣ್ಣನ ಪಕ್ಕದಲ್ಲಿದ್ದರು ; ಮುನಸೀಫರು ಅಮಲ್ದಾರರ ಪಕ್ಕದಲ್ಲಿದ್ದರು. ಭಗವದ್ಗೀತೆಯಿಂದ ಕೆಲವು ಶ್ಲೋಕಗಳನ್ನು ಮಠದ ಶಿಷ್ಯರು ಹೇಳಿದ ನಂತರ, ಕರಿಯಪ್ಪನವರು ಎದ್ದು ನಿಂತು ಅತಿಥಿಗಳಿಗೆ ಸ್ವಾಗತವನ್ನು ನೀಡಿ, ಇನ್‌ಸ್ಪೆಕ್ಟರವರಿಗೆ ವರ್ಗವಾಗಿರುವುದರಿಂದ ಅವರನ್ನು ಗೌರವಿಸುವುದಕ್ಕಾಗಿ ಆ ದಿನ ಸಭೆಯನ್ನು ಸೇರಿಸಿರುವುದಾಗಿಯೂ ಮುಖ್ಯ ಅತಿಥಿಗಳಾದ ಇನ್ಸ್ಪೆಕ್ಟರು ಸಲ್ಲಿಸಿರುವ ಸೇವೆಯನ್ನು ಪ್ರಶಂಸೆ ಮಾಡುವುದು ತಮ್ಮ ಕರ್ತವ್ಯವಾಗಿರುವುದೆಂದೂ ಹೇಳಿದರು. ಬಳಿಕ ರಂಗಣ್ಣನ ಗುಣಕಥನವಾಯಿತು. ಕರಿಯಪ್ಪ ನವರು ಮಾತನಾಡಿದ ನಂತರ ಅಮಲ್ದಾರರು ಮೊದಲಾದವರು ಮಾತನಾಡಬೇಕೆಂದು ಸ್ವಾಮಿಗಳು ತಿಳಿಸಿದ್ದರಿಂದ ಆಯಾ ಅಧಿಕಾರಿಗಳೂ ಯಥೋಚಿತವಾಗಿ ರಂಗಣ್ಣನನ್ನು ಪ್ರಶಂಸೆಮಾಡಿ ಮಾತನಾಡಿದರು. ಆಮೇಲೆ ಮುಖ್ಯ ಅತಿಥಿಯು ಉತ್ತರರೂಪವಾಗಿ ಭಾಷಣ ಮಾಡಬೇಕಾಯಿತು. ರಂಗಣ್ಣನ ಮನಸ್ಸು ಅಲ್ಲಕಲ್ಲೋಲವಾಗಿದ್ದುದರಿಂದ ಅವನಿಗೆ ಹರ್ಷವೇನೂ ಇರಲಿಲ್ಲ. ಅವನು ಎದ್ದು ನಿಂತು ಕೊಂಡು, ' ಪೂಜ್ಯ ಸ್ವಾಮಿಯವರೇ ! ಮಹನೀಯರೇ ! ಈ ದಿನ ತಾವುಗಳಲ್ಲ ಇಲ್ಲಿ ಸೇರಿ ನನಗೆ ಗೌರವವನ್ನು ತೋರಿಸಿದ್ದೀರಿ; ನನ್ನ ಗುಣಕಥನ ಮಾಡಿದ್ದೀರಿ. ಆದರೆ ಅವುಗಳಿಗೆ ನಾನು ಅರ್ಹನಲ್ಲ ಎಂದು ಹೇಳಬೇಕಾಗಿದೆ. ಈ ರೇಂಜಿನಲ್ಲಿ ಸ್ವಲ್ಪ ಸೇವೆ ಸಲ್ಲಿಸಿದ್ದೇನೆ. ಏನಾದರೂ ಒಳ್ಳೆಯ ಫಲಗಳು ದೊರೆತಿದ್ದರೆ, ಉಪಾಧ್ಯಾಯರ ಶ್ರದ್ಧಾಸಕ್ತಿಗಳೂ, ಜನರ ಬೆಂಬಲ ಪ್ರೊತ್ಸಾಹಗಳೂ ಅದಕ್ಕೆ ಕಾರಣಗಳು. ನನ್ನ ಆಧಿಕಾರಾವಧಿಯಲ್ಲಿ ನಾನು ಕೆಲವು ತಪ್ಪುಗಳನ್ನು ಮಾಡಿದ್ದನೆಂದು ಬಹಿರಂಗವಾಗಿ ಇಲ್ಲಿ ಒಪ್ಪಿ ಕೊಳ್ಳುತ್ತೇನೆ. ಆದರೆ ಉಪಾಧ್ಯಾಯರೂ, ಮಹಾಜನಗಳೂ ವಿಶ್ವಾಸದಿಂದಲೇ ನನ್ನನ್ನು ಕಾಣುತ್ತ ಬಂದರು. ಅವರಿಗೆಲ್ಲ ನಾನು ಬಹಳ ಕೃತಜ್ಞನಾಗಿದ್ದೇನೆ. ಮುಖ್ಯವಾಗಿ ಹೇಳಬೇಕಾದ