ಪುಟ:ರಂಗಣ್ಣನ ಕನಸಿನ ದಿನಗಳು.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ಗಮನ ಸಮಾರಂಭ

೩೨೫

ಹೋಗಿದ್ದರು. ಆದ್ದರಿಂದ ಮಾರನೆಯ ದಿನ ರೈಲಿಗೆ ಹೊರಡುವಾಗ ಒಂದೆರಡು ಟ್ರಂಕುಗಳು ಮತ್ತು ಎರಡು ಮೂರು ಹಾಸಿಗೆಗಳು, ಒಂದು ಬುಟ್ಟಿ, ಕೈ ಕೂಜ- ಇಷ್ಟು ಮಾತ್ರ ಸಾಮಾನುಗಳಿದ್ದುವು. ರೈಲ್ ಸ್ಟೇಷನ್ನಿನಲ್ಲಿ ನೂರಾರು ಜನ ಉಪಾಧ್ಯಾಯರೂ ಹುಡುಗರೂ ಸೇರಿದ್ದರು. ಹಳ್ಳಿಗಳಿಂದ ಕೆಲವರು ಪ್ರಮುಖರೂ ಬಂದಿದ್ದರು. ರೈಲು ಬಂತು. ಎರಡನೆಯ ತರಗತಿಯ ಗಾಡಿಯಲ್ಲಿ ರಂಗಣ್ಣನ ಹೆಂಡತಿಯೂ ಮಕ್ಕಳೂ ಕುಳಿತರು. ರಂಗಣ್ಣ ಉಪಾಧ್ಯಾಯರಿಗೆ ವಂದನೆ ಹೇಳುತ್ತ ಮುಖಂಡರಿಗೆ ಹಸ್ತಲಾಘವ ಕೊಡುತ್ತ ಗಾಡಿಯ ಬಳಿ ನಿಂತಿದ್ದನು. ಹತ್ತಾರು ಹೂವಿನ ಹಾರಗಳ ಭಾರದಿಂದ ಅವನ ಕತ್ತು ಜಗ್ಗುತಿತ್ತು. ಅವುಗಳನ್ನು ತೆಗೆದು ತೆಗೆದು ಗಾಡಿಯೊಳಕ್ಕೆ ಕೊಡುತ್ತಿದ್ದನು. ಆ ವೇಳೆಗೆ ಕಲ್ಲೇಗೌಡ ಮತ್ತು ಕರಿಯಪ್ಪ ಆತುರಾತುರವಾಗಿ ಬಂದರು. ರಂಗಣ್ಣ ಅವರ ಕೈ ಕುಲುಕಿ ಮಾತನಾಡಿಸಿದನು. ಅವರೂ ಸೊಗಸಾದ ಹಾರಗಳನ್ನು ಹಾಕಿದ. ಹಣ್ಣುಗಳು, ಬಾದಾಮಿ, ದ್ರಾಕ್ಷಿ, ಖರ್ಜೂರಾದಿಗಳನ್ನು ತುಂಬಿದ್ದ ಎರಡು ಬುಟ್ಟಿಗಳನ್ನು ಗಾಡಿಯೊಳಗಿಟ್ಟರು. 'ಕಲ್ಲೇಗೌಡರೇ ! ಕರಿಯಪ್ಪನವರೇ ! ನೀವು ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ತಪ್ಪದೆ ಬರಬೇಕು. ವಿಶ್ವೇಶ್ವರಪುರದಲ್ಲಿ ನನ್ನ ಮನೆ ಇದೆ' ಎಂದು ಆಹ್ವಾನವನ್ನು ರಂಗಣ್ಣ ಕೊಟ್ಟನು. ' ಆಗಲಿ ಸಾರ್ ! ಖಂಡಿತ ಬರುತ್ತೇವೆ' ಎಂದು ಅವರು ಹೇಳಿದರು. ಜನರಲ್ಲಿ ದಾರಿ ಬಿಡಿಸಿಕೊಂಡು ಗರುಡನಹಳ್ಳಿಯ ಪಟೇಲ್ ಮತ್ತು ಹನುಮನಹಳ್ಳಿಯ ಶ್ಯಾನುಭೋಗರು ಬಂದು ಕೈ ಮುಗಿ ದರು. ಅವರೂ ಹೂವಿನ ಹಾರಗಳನ್ನು ಹಾಕಿ, ಒಂದೊಂದು ರಸಬಾಳೆ ಹಣ್ಣಿನ ಗೊನೆಯನ್ನೂ ಒಂದೊಂದು ಹಲಸಿನ ಹಣ್ಣನ್ನೂ ಗಾಡಿಯೊಳಗಿಟ್ಟರು. ರಂಗಣ್ಣನು ನಗುತ್ತಾ ' ಇದಕ್ಕೆಲ್ಲ ನಾನು ಡಬ್ಬಲ್ ಚಾರ್ಜು ಕೊಡಬೇಕಾಗುತ್ತದೆಯೋ ಏನೋ ? ರೈಲಿಳಿದ ಮೇಲೆ ಪತ್ತೆಯಿಲ್ಲದೆ ಹೊರಕ್ಕೆ ಸಾಗಿಸಿ ಲಾರಿ ಗೊತ್ತು ಮಾಡಬೇಕಾಗುತ್ತೆ ! ' ಎಂದು ಹೇಳಿದನು. ರೈಲ್ವೆ ಗಾರ್ಡು ಶೀಟಿ ಊದಿದನು. ಗಾಡಿ ಹೊರಡಲನುವಾಯಿತು. ಮತ್ತೊಮ್ಮೆ ಎಲ್ಲರಿಗೂ ರಂಗಣ್ಣ ವಂದನೆಗಳನ್ನರ್ಪಿಸಿ ಗಾಡಿ ಹತ್ತಿದನು. ಊರೆಲ್ಲ ಪ್ರತಿಧ್ವನಿಸುವಂತೆ ಜಯಕಾರಗಳಾದುವು. ಗಾಡಿ ಹೊರಟಿತು.