ಪುಟ:ರಂಗಣ್ಣನ ಕನಸಿನ ದಿನಗಳು.pdf/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨೪

ರಂಗಣ್ಣನ ಕನಸಿನ ದಿನಗಳು

ಗಳನ್ನು ಅವನಲ್ಲಿ ಹೇಳಿಕೊಂಡು ಅವನ ಸಲಹೆಗಳನ್ನು ಪಡೆಯುತ್ತಿದ್ದರು. ಉಪಾಧ್ಯಾಯರಿಗೆ ಅವನು ಒಬ್ಬ ಇನ್ ಸ್ಪೆಕ್ಟರೆಂಬ ಭಾವನೆಯೇ ಇರಲಿಲ್ಲ. ಆದ್ದರಿಂದ ಆತ್ಮೀಯರನ್ನು ಬಿಟ್ಟು ಹೊರಡುವಾಗ ಅನುಭವಿಸುವ ಮೂಕ ವಿರಹವನ್ನು ಉಭಯ ಪಕ್ಷದವರೂ ಅನುಭವಿಸುತ್ತಿದ್ದರು. 'ನಾನು ಈ ರೇಂಜಿನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಇನ್ ಸ್ಪೆಕ್ಟರ್ ಗಿರಿಯ ಅನುಭವವೂ ನನಗೆ ಹೊಸದು. ನನ್ನಿಂದ ಏನು ಪ್ರಯೋಜನವಾಗಿದೆ ಎಂಬುದನ್ನು ಈಗ ಅಳತೆಮಾಡಿ ಹೇಳುವ ಕಾಲ ಬಂದಿಲ್ಲ. ಮುಂದೆ ಬರಬಹುದು. ನಾನು ಬಹಳ ಕಟ್ಟುನಿಟ್ಟಾಗಿ ರೂಲ್ಸುಗಳನ್ನು ಆಚರಣೆಗೆ ತರುತ್ತಿದ್ದವನೆಂದು ಉಪಾಧ್ಯಾಯರಲ್ಲಿ ಭಾವನೆ, ಆದರೆ ನಾನು ಬಹಳ ಮೆತು, ಉಪಾಧ್ಯಾಯರನ್ನು ಅವರ ಇಷ್ಟಾನುಸಾರ ಬಿಟ್ಟು ಆಡಳಿತವನ್ನು ಸಡಿಲವಾಗಿ ನಡೆಸುತ್ತ ಜುಲ್ಮಾನೆಗಳನ್ನು ಹಾಕದೆ ಶಿಸ್ತನ್ನು ಕೆಡಿಸಿದೆನೆಂಬ ಭಾವನೆ ಮೇಲ್ಪಟ್ಟ ಅಧಿಕಾರಿಗಳಿಗೆ ! ಇವುಗಳಲ್ಲಿ ಯಾವುದು ನಿಜ? ಯಾವುದು ಅಬದ್ಧ? ಎಂದು ಹೇಳುವುದು ಕಷ್ಟ. ವಿದ್ಯಾಭ್ಯಾಸ ಕ್ರಮದಲ್ಲಿ ಸುಧಾರಣೆಗಳಾಗಬೇಕು, ಅಧಿಕಾರಿಗಳ ಮತ್ತು ಉಪಾಧ್ಯಾಯರ ಸಂಬಂಧಗಳಲ್ಲಿ ಸುಧಾರಣೆಗಳಾಗಬೇಕು-ಎಂದು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ಕೆಲವು ಪ್ರಯೋಗ ಪರೀಕ್ಷೆಗಳನ್ನು ಇಲ್ಲಿ ನಾನು ಮಾಡಿದೆ. ಸೋಲಾಯಿತೊ ಗೆಲುವಾಯಿತೋ ನಾನು ಹೇಳಲಾರೆ. ಹೇಗಾದರೂ ಇರಲಿ, ಉಪಾಧ್ಯಾಯರ ವಿಚಾರದಲ್ಲಿ ನಾನು ಪ್ರೀತಿಯಿಂದಲೂ ಗೌರವದಿಂದಲೂ ನಡೆದು ಕೊಂಡಿದ್ದೇನೆ ಎಂಬುದೊ೦ದು ತೃಪ್ತಿ ನನಗಿದೆ. ಯಾರಿಗಾದರೂ ಅವರ ಮನಸ್ಸು ನೋಯುವಂತೆ ನಾನು ಕೆಟ್ಟ ಮಾತು ಆಡಿದ್ದರೆ, ಕೆಡುಕು ಮಾಡಿದ್ದರೆ, ಮನ್ನಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿ ಪಾಠ ಶಾಲೆಗಳನ್ನು ನಡೆಸಿಕೊಂಡು ಹೋಗುವ ಬಗ್ಗೆ ಕೆಲವು ಹಿತೋಪದೇಶಗಳನ್ನು ಮಾಡಿ, 'ಹೋಗಿ ಬರಲು ಅಪ್ಪಣೆ ಕೊಡಿ ಎಂದು ಮುಕ್ತಾಯ ಮಾಡಿದನು. ಹೂವು ಗಂಧಗಳ ವಿನಿಯೋಗವಾಗಿ ಸಭೆಯ ಮುಕ್ತಾಯವಾಯಿತು.

ಶಂಕರಪ್ಪನೂ ಗೋಪಾಲನೂ ಆ ದಿನ ಬೆಳಗ್ಗೆ ಯೇ ಒಂದು ಲಾರಿಯಲ್ಲಿ ಸಾಮಾನುಗಳನ್ನೆಲ್ಲ ಹಾಕಿಕೊಂಡು ಬೆಂಗಳೂರಿಗೆ ಹೊರಟು