ಪುಟ:ರಂಗಣ್ಣನ ಕನಸಿನ ದಿನಗಳು.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೦

ರಂಗಣ್ಣನ ಕನಸಿನ ದಿನಗಳು

'ಅದ್ಯಾಕೆ ಸ್ವಾಮಿ ಹೊರಗಿನವನು? ಒ೦ದು ಲಾಜಾದೊಳಗೆ ಮೈಸೂರು ಸೋಪು ಹಚ್ಚಿ ನುಣ್ಣಗೆ ಮಾಡಿ ಬಿಡ್ತನೆ !!

ರಂಗಣ್ಣ ಕಕ್ಕಾಬಿಕ್ಕಿಯಾಗಿ " ಏನ್ ಮೇಷ್ಟೆ ! ನೀವು ಕ್ಷೌರದವರೇ ? ” ಎಂದು ಕೇಳಿದನು.

'ತಮ್ಮ ಶಿಷ್ಯ ಸಾರ್ ! ನನ್ನ ಗುರುಗಳು ತಾವು ! '

ರಂಗಣ್ಣ ಹಾಗೆಯೇ ದುರುಗುಟ್ಟಿಕೊಂಡು ಆ ಮೇಷ್ಟರನ್ನು ನೋಡಿದನು. ಮುಖದ ಛಾಯೆ ಎಲ್ಲಿಯೋ ನೋಡಿದ ಜ್ಞಾಪಕ.

'ತಾವು ಮರೆತುಹೋಗಿದ್ದೀರಿ ಸಾ . ನಾನು ಮುನಿಸ್ವಾಮಿ, ತುಮಕೂರು ನಾರ್ಮಲ್ ಸ್ಕೂಲಿನಲ್ಲಿ ತಮ್ಮ ಶಿಷ್ಯ.'

ಆಗ ಸಮಸ್ಯೆ ಬಗೆ ಹರಿಯಿತು. ಒಳ್ಳೆಯ ಶಿಷ್ಯ ! ಒಳ್ಳೆಯ ಗುರು! ಹಜಾಮರ ಗುರು ! ದೊಡ್ಡ ಹಜಾಮನ ಪಟ್ಟ ತನಗೆ ಬಂದ ಹಾಗಾಯಿತು. ಒಂದು ನಿಮಿಷ ಹಾಗೆಯೇ ಆಲೋಚನಾ ಮಗ್ನನಾಗಿದ್ದು, ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಹಜಾಮತ್ ಮಾಡುವ ಪರೀಕ್ಷಕರು ದೊಡ್ಡ ಹಜಾಮರಲ್ಲದೆ ಮತ್ತೆ ಏನು ? ನಾನು ಸಹ ಆ ಹಜಾಮನ ಕಲಸ ಮಾಡಿದ್ದೇನಲ್ಲ' ಎಂದು ಹೇಳಿಕೊಂಡನು. ಈಗೇನು ಮಾಡಲಿ ಮೇಷ್ಟೆ ? ನಿಮ್ಮ ಸ್ಕೂಲ್ ತನಿಖೆ ಮಾಡಲೇ ಬೇಡವೇ ? '

'ಆಗತ್ಯ ಮಾಡಿ ಸಾರ್, ಈ ದಿನ ಇಲ್ಲೇ ಮೊಕ್ಕಾಂ ಮಾಡಿ ಸ್ನಾನ, ಊಟ ಮುಗಿಸಿಕೊಂಡು ಸಾಯಂಕಾಲ ಊರು ಸೇರ ಬಹುದು. ಶ್ಯಾನುಭೋಗರು ಒಳ್ಳೆಯವರು ಎಲ್ಲಾ ಏರ್ಪಾಟು ಮಾಡ್ತಾರೆ ” ಎಂದು ಹೇಳಿ ಗೋಡೆಗೆ ಹಾಕಿದ್ದ ನೀಲಿಬಟ್ಟೆ ಯ ಪರದೆಯನ್ನು ಮೇಷ್ಟ್ರು ಎಳೆದನು, ಸೊಗಸಾದ ದೊಡ್ಡ ಕನ್ನಡಿ ! ರಂಗಣ್ಣನ ಮುಖ ಸೊಗಸಾಗಿ ಅದರಲ್ಲಿ ಕಂಡು ಬರುತ್ತಿತ್ತು ' ತಾವು ಕ್ರಾಪ್ ಬಿಟ್ಟಿದ್ದೀರಿ ಸಾರ್, ಒಳ್ಳೆ ಫ್ರೆಂಚ್ ಕಟ್ ಮಾಡುತ್ತೇನೆ. ಶಿಷ್ಯನ ಕೈವಾಡ ಸ್ವಲ್ಪ ನೋಡಿ !'

'ಮೇಷ್ಟೇ ! ಇದೇನು ? ಹೊರಗೆ ನೋಡಿದರೆ ಪ್ರಾಥಮಿಕ ಶಾಲೆ, ಒಳಗೆ ನೋಡಿದರೆ ಹಜಾಮ ಶಾಲೆ !'