ಪುಟ:ರಂಗಣ್ಣನ ಕನಸಿನ ದಿನಗಳು.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೮

ರಂಗಣ್ಣನ ಕನಸಿನ ದಿನಗಳು

ಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಸ್ಕೂಲ್ ಕಟ್ಟಡವನ್ನು ಮಾವಿನೆಲೆ, ಬಣ್ಣ ಬಣ್ಣದ ಕಾಗದದ ಮಾಲೆ- ಇವುಗಳಿಂದ ಅಲಂಕರಿಸಿದ್ದರು. ತನಿಖೆಯೇನೋ ಆಯಿತು, ಉಪಾಧ್ಯಾಯರು ಚೆನ್ನಾಗಿ ಕೆಲಸ ಮಾಡಿದ್ದರು, ನಾರ್ಮಲ್ ಸ್ಕೂಲಿನಲ್ಲಿ ಬರೆದಿದ್ದ ಟಿಪ್ಪಣಿಗಳನ್ನು ಸಹ ಆತ ರಂಗಣ್ಣನಿಗೆ ತೋರಿಸಿದನು. ಸ್ಕೂಲ್ ಕಮಿಟಿ ಮೆಂಬರುಗಳು ಸಹ ಹಾಜರಿದ್ದು ಮೇಷ್ಟರ ಕೆಲಸದ ಬಗ್ಗೆ ಮೆಚ್ಚಿಕೆಯ ಮಾತುಗಳನ್ನು ಹೇಳಿದರು.

ಸಾಯಂಕಾಲ ಕಾಫಿ ಉಪ್ಪಿಟ್ಟು, ಬಾಳೆಯ ಹಣ್ಣು ಮತ್ತು ಎಳನೀರುಗಳ ಸಮಾರಾಧನೆ ಆದ ಮೇಲೆ ರಂಗಣ್ಣ ಅಲ್ಲಿಂದ ಜನಾರ್ದನಪುರಕ್ಕೆ ಹೊರಟನು. ಮೇಷ್ಟು ದೊಡ್ಡ ರಸ್ತೆ ಸಿಕ್ಕುವವರೆಗೂ ಜೊತೆಯಲ್ಲೇ ಬಂದನು. ರಂಗಣ್ಣನು, 'ಮೇಷ್ಟೆ ! ನೀವೊಂದು ಕೆಲಸ ಮಾಡಬೇಕು. ಸ್ಕೂಲಿನ ಹಿಂಭಾಗದಲ್ಲಿ ನಿಮ್ಮ ಮನೆ ಇದೆ. ಪಕ್ಕದಲ್ಲಿ ಬಯಲು ಸಹ ಇದೆ. ಆ ಬಯಲಲ್ಲಿ ಒ೦ದು ಗುಡಿಸಿಲನ್ನು ಕಟ್ಟಿ ಕೊಂಡು ಅಲ್ಲಿ ನಿಮ್ಮ ಸೆಲೂನ್ ಇಟ್ಟುಕೊಳ್ಳಿ, ನಿಮ್ಮ ತಮ್ಮನ್ನ ಅಲ್ಲಿ ಕೆಲಸಕ್ಕೆ ಹಾಕಿ, ಪಾಠ ಶಾಲೆಯ ಕಟ್ಟಡದಲ್ಲಿ ಪಾಠಗಳನ್ನು ಮಾತ್ರ ಮಾಡಿ, ಗುಡಿಸಿಲಿಗೆ ಖರ್ಚು ಎಷ್ಟಾಗುತ್ತೆ ಹೇಳಿ ? ' ಎಂದು ಕೇಳಿದನು.

'ಮುವ್ವತ್ತು ರೂಪಾಯಿ ಆಗಬಹುದು ಸಾರ್.'

'ಒಳ್ಳೆಯದು ಮೇಷ್ಟೇ. ಶ್ಯಾನುಭೋಗರನ್ನೂ ಕಮಿಟಿ ಮೆಂಬರಗಳನ್ನೂ ಕಂಡು ಅವರಿಗೆ ನನ್ನ ಸಲಹೆ ತಿಳಿಸಿ, ಅವರೆಲ್ಲ ನಿಮ್ಮಲ್ಲಿ ವಿಶ್ವಾಸವಾಗಿದ್ದಾರೆ. ಗುಡಿಸಿಲಿಗೆ ಸಹಾಯಮಾಡುತ್ತಾರೆ. ನಾನು ಹೇಳಿದೆ ಎಂದು ತಿಳಿಸಿ, ಗೊತ್ತಾಯಿತೋ ? ಅವರು ಸಹಾಯ ಮಾಡದಿದ್ದರೆ ನನಗೆ ಕಾಗದ ಬರೆಯಿರಿ ?'

'ನನ್ನ ಹತ್ತಿರ ಇಪ್ಪತ್ತು ರುಪಾಯಿ ಮಡಗಿಕೊಂಡಿದ್ದೇನೆ ಸಾರ್. ನನ್ನ ಹೆಂಡತಿ ಸೀರೆ ಇಲ್ಲ, ತೆಕ್ಕೊಡಿ ಅಂತ ವರಾತ ಮಾಡುತ್ತಿದ್ದಾಳೆ. ತಮ್ಮ ಸಲಹೆಯೇನೋ ಚೆನ್ನಾಗಿದೆ. ಅವಳನ್ನು ಕೇಳಿ ನೋಡುತ್ತೇನೆ ಸಾರ್ .'