ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

30

ಪ೦ಪ ರಾಮಾಯಣದ ಕಥೆ

ನಿಗೆ ಜಿತಶತ್ರು ವಿಜಯಸಾಗರರೆಂಬಿಬ್ಬರು ಮಕ್ಕಳು. ತ್ರಿದಶಂಜಯನು ಹಲವು ಕಾಲ ರಾಜ್ಯಭಾರಮಾಡಿ ಜಿತಶತ್ರುವಿಗೆ ಪಟ್ಟವನ್ನು ಕಟ್ಟಿ ತಪೋರಾಜ್ಯದಲ್ಲಿ ನಿಂತನು. ಜಿತಶತ್ರುವಿನ ಮಗ ಅಜಿತಭಟ್ಟಾರಕನು ; ವಿಜಯ ಸಾಗರನ ಮಗ ಸಗರ ಚಕ್ರೇಶ್ವರನು. ಹೀಗೆ ಜಿನಪತಿಯನ್ನೊಬ್ಬನೂ ಜನಪತಿಯನ್ನೊಬ್ಬನೂ ಪಡೆದರು. ಆ ಕಾಲದಲ್ಲಿ ವಿಜಯಾರ್ಧದ ರಥನೂ ಪುರಚಕ್ರವಾಳ ಪುರದ ವಿಯಚ್ಚರ ರಾಜನಾದ ಪೂರ್ಣ ಘನನಿಗೆ ತೋಯದವಾಹನನೆಂಬ ಮಗನು ಹುಟ್ಟಿದನು. ಉತ್ತರ ಪ್ರಾಂತದಲ್ಲಿಯ ಅಂಬರ ತಿಲಕವೆಂಬ ಪುರದ ಸುಲೋಚನನಿಗೆ ಸಹಸ್ರಲೋಚನನೆಂಬ ಮಗನೂ ಉತ್ಸಲನೇತ್ರೆಯೆಂಬ ಮಗಳೂ ಹುಟ್ಟಿದರು. ಈ ಹುಡುಗಿಯನ್ನು ಪೂರ್ಣ ಘನನು ತೋಯದವಾಹನನಿಗೆ ಕೊಡೆಂದು ಸುಲೋಚನನಿಗೆ ಹೇಳಿ ಕಳುಹಿಸಲು, ಆತನು ಚಕ್ರವರ್ತಿಯಾಗುವ ಸಗರನಿಗೆ ಈಕೆಯು ಪಟ್ಟ ಮಹಿಷಿಯಾಗುವಳೆಂದು ನೈಮಿತ್ತಿಕರು ಹೇಳಿರುವ ಕಾರಣ ತೋಯದವಾಹನನಿಗೆ ಕೊಡಲಾಗುವುದಿಲ್ಲವೆಂದು ಹೇಳಿದುದರಿಂದ, ಪೂರ್ಣ ಘನನು ಬಹಳ ಸಿಟ್ಟುಗೊಂಡು ದಂಡೆತ್ತಿ ಬಂದು ಅಂಬರ ತಿಲಕವನ್ನು ಮುತ್ತಲು, ಸುಲೋಚನನು ಮಗನನ್ನೂ ಮಗಳನ್ನೂ ತನ್ನ ವಿದ್ಯೆಯಿಂದ ಪಕ್ಷಿಗಳನ್ನಾಗಿ ಮಾಡಿ ಹೊರಡಿಸಿ ತಾನು ಪೂರ್ಣ ಘನನೊಡನೆ ಕಾದಿ ಸತ್ತನು. ಪೂರ್ಣಘನನು ಪಟ್ಟಣವನ್ನು ಹೊಕ್ಕು ಕನ್ನೆಯನ್ನು ಹುಡುಕಿ ಕಾಣದೆ ತನ್ನ ಪಟ್ಟಣಕ್ಕೆ ಹಿಂದಿರುಗಿ ಹೋದನು.
ಇತ್ತ, ಸಹಸ್ರಲೋಚನನೂ ಉತ್ಸಲನೇತ್ರೆಯೂ ಶರಭಾಟವಿಯನ್ನು ಹೊಕ್ಕು ನೇತ್ರಾವತೀ ತೀರದೊಳಿರುವಲ್ಲಿ ಆ ಸಮಯಕ್ಕೆ ಸಗರನನ್ನು ಅವನ ದುಷ್ಟಾಶ್ವವು ಎಳೆದು ತಂದು ಆ ಕಾಡಿನಲ್ಲಿಳಿಸಿ ಹೋಯಿತು. ಸಗರನು ಅಲ್ಲಿದ್ದ ಅಣ್ಣ ತಂಗಿಯರನ್ನು ನೋಡಿ ಅವರ ರೂಪ ಲಾವಣ್ಯಗಳಿಗೆ ಬೆರಗಾಗಿ ಅಂತಹ ಭಯಂಕರವಾದ ಅಡವಿಗೆ ಅವರು ಬರಲು ಕಾರಣವೇನೆಂದು ಕೇಳಲು ಸಹಸ್ರ ಲೋಚನನು ತಮ್ಮ ವೃತ್ತಾಂತವನ್ನು ತಿಳಿಸಿ ಭೂನಾಥನಾಗಿ ತೋರುವ ಅವನು ಅಲ್ಲಿಗೆ ಬಂದ ಕಾರಣವೇನೆಂದು ಕೇಳಿದನು. ಅದಕ್ಕೆ ತಾನು ಅಯೋಧ್ಯಾ ಪತಿಯಾದ ಸಗರನೆಂದು ಹೇಳಿ ತಾನು ಬ೦ದ ತೆರನನ್ನು ತಿಳಿಸಲು ಸಹಸ್ರ ಲೋಚನನು ಆಶ್ಚರ ಪಟ್ಟು, "ಸಗರನನ್ನಾಶ್ರಯಿಸಿದಲ್ಲಿ ಹಗೆಗಳು ನಾಶವಾಗುವರು, ಇಷ್ಟಾರ್ಥವು ಈಡೇರುವುದು" ಎಂದು ತಮ್ಮ ತಂದೆಯು ಅಪ್ಪಣೆ ಕೊಡಿಸಿದ್ದ ನೆಂದು ಹೇಳಿದನು. ಇದನ್ನು ಕೇಳಿ ಸಗರನು ಅವರ ತಂದೆಯು ಹೇಳಿದಂತೆಯೇ ಮಾಡುವೆನೆಂದೂ ದುಃಖವನ್ನುಳಿದು ಸಂತೋಷವಾಗಿರೆಂದೂ ಹೇಳಿ, ತನ್ನ ದುಷ್ಟಾಶ್ವದ ಹಚ್ಚೆ ಹಿಡಿದು ಹೋಗುತ್ತಿರುವಲ್ಲಿ ಹಸ್ಯತ್ವ ರಥಸದಾತಿಗಳ ಕಳಕಳವು ಕೇಳಿಸಿತು. ಹೀಗೆ ತನ್ನ ಸೈನ್ಯವು ಬಂದು ಸೇರಲು ಸಗರನು ಸಹಸ್ರ ಲೋಚನನನ್ನೂ ಉತ್ಸಲನೇತ್ರೆಯನ್ನೂ ತನ್ನ ಪಟ್ಟದಾನೆಯ ಮೇಲೆ ಕೂಡಿಸಿಕೊಂಡು