ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೧೦೧

ಮಾತು, ಹಾಡು, ವಾದನ, ನೃತ್ಯಗಳು ಹೇಗೆ ಮೂಡಿಬಂದುವು ಎಂಬ ವಿವೇಚನೆಯಿದು. ಇದು ಬಿಡಿಬಿಡಿಯಾದ ವಿವೇಚನೆ. ಇದರ ಜತೆಗೆ, ಒಟ್ಟಂದದ ವಿಮರ್ಶೆ ಬೇಕು. ಓರ್ವನ ರಂಗದಲ್ಲಿನ ಕೆಲಸ, ಒಟ್ಟು ಪ್ರದರ್ಶನದ ನೆಲೆಯಲ್ಲಿ ಹೇಗೆ ಮೂಡಿಬಂತು, ಪೂರಕವಾಗಿತ್ತೆ, ಅಲ್ಲ ಬರಿಯ ಓರ್ವನ ಪ್ರತಿಭೆಯ ಪ್ರದರ್ಶನ ಮಾತ್ರವೇ ಆಯಿತೆ ಎಂಬ ನೆಲೆಯಿಂದ ನೋಡಿ ಅಳೆಯಬೇಕು. ಅಂತೆಯೇ, ಇಡಿಯ' ಪ್ರದರ್ಶನ ವನ್ನು ಒಟ್ಟಾಗಿ ತೂಗಿನೋಡುವುದೂ ಅಗತ್ಯ.

ರಂಗದ ಪ್ರದರ್ಶನವೆಂಬುದು ಕಲಾವಿದನ ಸ್ವಾತಂತ್ರ್ಯವೂ, ಅವನ ದೊಡ್ಡ ಶಕ್ತಿಯೂ ಆಗುತ್ತದೆ. ಅದೇ ಮಿತಿಯೂ ಆಗಬಹುದು. ಅದು ಬಳಕೆಯನ್ನು ಹೊಂದಿಕೊಂಡಿದೆ. ಅಲ್ಲದೆ, ರಂಗದಲ್ಲಿ ಕಲಾವಿದನು "ಪರಾಧೀನ"ನೂ ಹೌದು. ಆತನ ಪ್ರದರ್ಶನದ ಯಶಸ್ಸು, ಸಹಪಾತ್ರ ಧಾರಿ, ಹಿಮ್ಮೇಳ ಪ್ರೇಕ್ಷಕರನ್ನು ಹೊಂದಿಕೊಂಡಿರುತ್ತದೆ. ಒಬ್ಬನ ಅಭಿನಯಕ್ಕ, ರುಚಿಗೆ ಮತ್ತೊಬ್ಬನ ಪ್ರತಿಕ್ರಿಯೆ ಪ್ರದರ್ಶನವನ್ನು ಬೆಳಗಿಸಬಹುದು ಅಥವಾ, ತೊಡರನ್ನೂ ಉಂಟುಮಾಡಬಹುದು. ವ್ಯಕ್ತಿಪರವಾದ ಪ್ರದರ್ಶನ ಅಥವಾ ಮೆಚ್ಚುಗೆ, ಒಂದು ಹಂತಕ್ಕಿಂತ ಆಚೆಗೆ ಕಲೆಗೆ ಅಪಾಯಕಾರಿಯಾಗುತ್ತದೆ.

ಯಕ್ಷಗಾನದ ಸಂದರ್ಭದಲ್ಲಿ- ಅರ್ಥಾತ್ ಸಾಂಪ್ರದಾಯಿಕ ರೂಪನಿಷ್ಠ ಮಾಧ್ಯಮಗಳೆಲ್ಲದರ ಸಂದರ್ಭದಲ್ಲಿ ಗುಣಮಟ್ಟದ ಪ್ರಶ್ನೆ ಸಮಕಾಲೀನ ಸಾಹಿತ್ಯ ಕಲೆಗಳ ಸಂದರ್ಭದಲ್ಲಿರುವಂತೆ ಮುಕ್ತವಲ್ಲ. ಅಂದರೆ, ಗುಣಮಟ್ಟದ ಮೌಲ್ಯಮಾಪನವು, ಶೈಲಿಯ ಪ್ರಶ್ನೆಗೆ ಸಂಬಂಧಿಸಿಕೊಂಡೇ ಇರುತ್ತದೆ. ಕಲಾರೂಪದ 'ಮರಾದೆ'ಯನ್ನು ಒಪ್ಪಿಕೊಂಡೇ, ಅದರೊಳಗೆ ಕಲಾವಿದ ಪ್ರದರ್ಶನದ ತೂಕ ಬಣ್ಣಗಳನ್ನು ಗ್ರಹಿಸಬೇಕಾಗುತ್ತದೆ. ಔಚಿತ್ಯವೆಂಬುದರಲ್ಲಿ ಶೈಲಿಯು ಮುಖ್ಯ ಅಂಗವಾದುದರಿಂದ ಈ ಎಚ್ಚರ ಆವಶ್ಯಕ.

ಖಂಡನಾತ್ಮಕ - ಪ್ರೋತ್ಸಾಹಕ

ವಿಮರ್ಶೆಯೆಂಬುದರಲ್ಲಿ ಖಂಡನಾತ್ಮಕ ಮತ್ತು ಪ್ರೋತ್ಸಾಹಕವೆಂಬ ಎರಡು ಅಂಶಗಳಿದ್ದೆ ಇರುತ್ತವೆ. ಆದರೆ, ವಿಕೃತಿಗಳ ಕುರಿತು ಆಕ್ಷೇಪಿಸುವ ಭರದಲ್ಲಿ ವಿಮರ್ಶಕನು ಆಕ್ರೋಶವನ್ನು, ಖಂಡನೆಯನ್ನು ಪ್ರಧಾನವಾಗಿಸಿದರೆ, ಅದು ಸಾಮರ್ಥ್ಯದ ಅಪವ್ಯಯವಾಗುವುದು