ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮ / ವಾಗರ್ಥ

ಭಾಗವತನ ಮಾತುಗಾರಿಕೆಯ ಮುಖ್ಯ ಅಪೇಕ್ಷಿತ ಲಕ್ಷಣಗಳು ಎರಡು: ಅದು, ಸಂಕ್ಷಿಪ್ತವಾಗಿರಬೇಕು, ಪಾತ್ರಗಳ ಮಾತುಗಳಂತೆ ದೀರ್ಘವಾಗಬಾರದು. ಮತ್ತು, ಭಾಗವತನು ಯಾವುದೇ ಪಾತ್ರ ಅಥವಾ ಪಕ್ಷದ ಪರವಾಗಿರಬಾರದು. ಅಂದರೆ, ಆತನು ಎಲ್ಲರ ಪರವಾಗಿರ ಬೇಕು. ಅವನು ಪಾತ್ರಗಳ ಅಂತರಂಗವೆ ಆಗಿದ್ದು ವ್ಯವಹರಿಸಬೇಕು. ಪಾತ್ರಗಳು ಸನ್ನಿವೇಶಕ್ಕೆ ಸ್ವಂತ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, 'ಓಹೋಯ್ ಭಾಗವತರೆ, ಇವನೇನು ಹೇಳುತ್ತಾ ಇರುವುದಯ್ಯ' ಎಂಬಂತೆ ಮಾತಾಡುವಾಗ, 'ಭಾಗವತರೆ' ಎಂದೇ ಹೆಸರಿಸುವ ಕ್ರಮ ವಿದ್ದಿತು. ಇದು, ಭಾಗವತನು ಪಾತ್ರದ್ದೆ ಒಂದು ಅಂಶ ಎಂಬುದನ್ನು ತೋರಿಸುತ್ತದೆ.

ಒಟ್ಟಿನಲ್ಲಿ ಭಾಗವತನು, ನಮ್ಮ ವೇದಾಂತಿಗಳು ಹೇಳುವ 'ಸಾಕ್ಷೀ, ಚೇತಾ, ಕೇವಲ'ನಂತಿದ್ದೂ, ಪ್ರದರ್ಶನದುದ್ದಕ್ಕೂ 'ಅಂತರ್ಯಾಮಿ' ಯಾಗಿಯೂ ಇರುವನು. ಆತನ ಮಾತುಗಾರಿಕೆಯೆಂಬುದು ಈ ಸ್ಥಾನ ಕ್ಕನುಗುಣವಾಗಿ ಇರಬೇಕು. ಭಾಗವತನ ಈ ಕೆಲಸದಲ್ಲಿ ಕೆಲವೊಮ್ಮೆ, ಹಿಮ್ಮೇಳವಾದಕರಾದ ಚಂಡೆ-ಮದ್ದಲೆಗಾರರು ಸಹಕರಿಸುವುದುಂಟು.

ಪಾತ್ರಗಳ ಮಾತುಗಳಿಗೆ ಮಾತು, ಅರ್ಥವೆಂಬ ಎರಡೂ ಪದ ಗಳಿದ್ದರೂ 'ಅರ್ಥ'ವೆಂಬುದೇ ಹೆಚ್ಚು ಪ್ರಚಲಿತವಾಗಿದೆ. ಇದು ಪ್ರಾಯಃ ಪುರಾಣಕಾವ್ಯಗಳ ವಾಚನ-ಪ್ರವಚನದ ಅರ್ಥವಿವರಣೆಯಿಂದ ಬಂದು ದಿರಬೇಕು. ಯಕ್ಷಗಾನದ ಆಟಗಳ ಅರ್ಥಗಾರಿಕೆಯೆಂಬುದು, ಸು. ೧೯೩೦ರ ತನಕವೂ, ತೀರ ಮಿತವಾಗಿದ್ದು, ಪದ್ಯಗಳ ಸರಳಾನುವಾದ ದಂತಿರುತ್ತಿತ್ತೆಂದು ಕೇಳುತ್ತೇವೆ. ಅದು ಬೆಳವಣಿಗೆಗೊಂಡುದು, ಅನಂತರದ ಕಾಲದಲ್ಲಿ. ಈಗ ಅದು ವಿವಿಧ ಮುಖಗಳಲ್ಲಿ ಬೆಳೆದಿದ್ದು ಅತ್ಯುತ್ತಮ ಮಟ್ಟದ ಸಾಹಿತ್ಯಕ, ನಾಟಕೀಯ ಗುಣಗಳನ್ನು ಹೊಂದಿದ ವಾಙ್ಮಯವಾಗಿದೆ.

ಅರ್ಥಗಾರಿಕೆಯೆಂಬುದು ಆಶುಭಾಷಣ ಪದ್ಧತಿಯದು. ಪ್ರಸಂಗದ ಸನ್ನಿವೇಶ ಮತ್ತು ಪದ್ಯಗಳನ್ನು ಆಧರಿಸಿ ಪಾತ್ರಧಾರಿಗಳು ಸ್ವಂತ ರಚಿಸಿ ಆಡುವ ನಾಟಕವದು. ಕಥಾಸಂದರ್ಭ, ಪ್ರಸಂಗಕಾವ್ಯ, ರಂಗಪರಂಪರೆ ಗಳು ಅರ್ಥದ ಮುಖ್ಯ ಆಧಾರ. ಕಲಾವಿದನ ಅಧ್ಯಯನ ಸಂಸ್ಕಾರ,