ತಾಳಮದ್ದಳೆ : ಕೆಲವು ಗ್ರಹಿಕೆಗಳು
೧
ತಾಳಮದ್ದಲೆ ಎಂಬುದು ಯಕ್ಷಗಾನ ರಂಗಭೂಮಿಯ ಒಂದು
ಕವಲು. ಯಕ್ಷಗಾನದ ಸಮಗ್ರ ರೂಪವಾದ ಬಯಲಾಟದಿಂದ ವೇಷ,
ನೃತ್ಯಗಳನ್ನು ಕಳಚಿದಾಗ, "ತಾಳಮದ್ದಳೆ'ಯಾಗುತ್ತದೆ. (ಇದು
ಸರಳೀಕೃತ ವಿವರಣೆ). ಹಾಗಾಗಿ ಅದು 'ಆಟ'ವಾದರೆ, ಇದು 'ಕೂಟ':
ತಾಳಮದ್ದಳೆ ಎಂಬ ರಂಗಪ್ರಕಾರ- ಸ್ವತಂತ್ರ ಪರಿಶೀಲನೆಗೆ ಅರ್ಹ
ವಾಗಿರುವ, ಕನ್ನಡ ಕಲಾ ಸಾಹಿತ್ಯದ ಸಂಕೀರ್ಣದ ಒಂದು ಅನರ್ಘ್ಯವಾದ
ವಸ್ತು, ಜಾನಪದದ, ನಾಟಕದ, ಸಾಹಿತ್ಯ ಕೃತಿಗಳ ಒಂದೊಂದು ಚಿಕ್ಕ
ಅಂಶವನ್ನು, ಪದವನ್ನು, ತಂತ್ರದ ಅಂಶವನ್ನು ಹಿಡಿದು ಅದ್ಭುತ
ವೆನಿಸುವ ವ್ಯಾಖ್ಯಾನ, ವಿಮರ್ಶೆ ನೋಟಗಳನ್ನು ನೀಡುವ ನಮ್ಮ
ವಿಮರ್ಶಕ ವರ್ಗ, ಈ ಕಲಾಪ್ರಕಾರದ ಬಗೆಗೆ ಲಕ್ಷ್ಯಹರಿಸದಿರುವುದು
ವಿಲಕ್ಷಣವಾಗಿದೆ. ವಸ್ತುವಿನ ಬೆಳವಣಿಗೆ, ನಾಟಕ ಕ್ರಿಯೆಗಳ ಸಾಹಿತ್ಯಕ
ಅಂಶ, ಮಾತುಗಾರಿಕೆಯ ಅಸಾಮಾನ್ಯ ವೈಭವ ಮತ್ತು ವಾಕ್‌ಶಕ್ತಿ
ವ್ಯುತ್ಪತ್ತಿಗಳ ದೃಷ್ಟಿಯಿಂದ ಕನ್ನಡ ಸಾಹಿತ್ಯರಂಗಕ್ಕೆ ಹೊಸ ಸಾಧ್ಯತೆ
ಗಳನ್ನು ದಿಗ್ದರ್ಶಿಸುವ ಶಕ್ತಿ ಈ ಪ್ರಕಾರಕ್ಕಿದೆ.
ತಾಳಮದ್ದಳೆಯ ಪ್ರಧಾನಶಕ್ತಿ ಅದರ ಆಶುಭಾಷಣ ಪದ್ಧತಿ,
ಪ್ರಸಂಗವೆಂಬ ಹಾಡುಗಬ್ಬದ ಪದ್ಯಗಳು ತುಂಬ ಸ್ಥೂಲವಾದ ಹಂದರ
ಮಾತ್ರ. ಪ್ರಸಂಗದ ಕಥಾವಸ್ತುವಿನ ಸ್ವರೂಪಕ್ಕೆ, ಅದರ ಸಾಮರ್ಥ್ಯಕ್ಕೆ
ಮಹತ್ವ ಇರುವುದಾದರೂ, ಪ್ರದರ್ಶನದ ಯಶಸ್ಸಿನ ಬಹುಭಾಗ
'ಅರ್ಥಧಾರಿ' ಎಂಬ ಕಲಾವಿದನದ್ದೇ. ಸದ್ಯ, ತಾಳಮದ್ದಳೆಯ
ತಾಳಮದ್ದಳೆ ಎಂದರೆ ಒಂದು ಬಗೆಯ ಪ್ರವಚನಾತ್ಮಕ ರಂಗಭೂಮಿ, ನಟರು ಅಂದರೆ ಹಿಮ್ಮೇಳ ಮತ್ತು ಅರ್ಥಧಾರಿಗಳು, ಸಾದಾ ಉಡುಪಿನಲ್ಲಿ, ವೇದಿಕೆಯಲ್ಲಿ ಕುಳಿತಿರುತ್ತಾರೆ. ಭಾಗವತರು ಹಾಡುವ ಹಾಡುಗಬ್ಬ ಕವಿರಚಿತ. ಅದನ್ನು ಸ್ಥೂಲ ಆಧಾರ ಚೌಕಟ್ಟಾಗಿ ಇರಿಸಿ, ಮಾತುಗಾರರು ಸ್ವಂತ ಮಾತಿನಿಂದ ಸ್ವಗತ, ಸಂಭಾಷಣ, ವಾದ-ವಾಗ್ವಾದ ಕಲ್ಪಿತ ಪ್ರಕ್ರಿಯೆಗಳಿಂದ ನಾಟಕವನ್ನು ಬೆಳೆಸುತ್ತಾರೆ: ಸರಳ ಅನ್ನಿಸಿದರೂ ತಾಂತ್ರಿಕ ಪ್ರಾವೀಣ್ಯವೂ ಇಲ್ಲಿ ಆವಶ್ಯಕ. ತಾಳಮದ್ದಳೆಗೆ ಜಾಗರ, ಕೂಟ ಎಂದೂ ಹೆಸರುಗಳಿವೆ.