ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦ / ವಾಗರ್ಥ

ಇಷ್ಟೆಲ್ಲ ಸಂಗತಿಗಳನ್ನು ನಿಭಾಯಿಸಿಕೊಂಡು, ರಂಗದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಿಸುತ್ತ ಪಾತ್ರನಿರ್ವಹಣೆ ಮಾಡಬೇಕಾದ ಅರ್ಥ ದಾರಿಯ ಕಲಾಪರಿಶ್ರಮವು ಬಲುದೊಡ್ಡದು. ಪಾಂಡಿತ್ಯ, ಪ್ರತಿಭೆ, ಸ್ವರಸಂಪತ್ತು, ಸಮಯಸ್ಫೂರ್ತಿ, ವಿಶ್ಲೇಷಕ ಮತ್ತು ಸ್ಪಷ್ತ್ಯಾತ್ಮಕ ರಚನಾಸಾಮರ್ಥ್ಯ, ದೃಷ್ಟಾಂತಗಳ ಸಂಗ್ರಹ, ರಸಪ್ರಜ್ಞೆ ಪ್ರಸಂಗ ಮಾಹಿತಿ ಬಲು ಹೊತ್ತು ಜನರನ್ನು ಆಕರ್ಷಿಸಿಡಬಲ್ಲ ಕಾಂತಶಕ್ತಿ- ಹೀಗೆ ಹಲವು. ಇವೆಲ್ಲ ದೊಡ್ಡ ಪ್ರಮಾಣದಲ್ಲಿ ಮೊದಲ ದರ್ಜೆಯ ತಾಳಮದ್ದಳೆಯ ರಂಗದಲ್ಲಿ ಕಾಣಬರುತ್ತದೆ. ತಾಳಮದ್ದಳೆಯಲ್ಲಿ ಇರುವ ಯೋಗ್ಯತೆ, ಕಲಾಪರಿಶ್ರಮಗಳ ಪ್ರಮಾಣಕ್ಕೆ ತಕ್ಕ ಮನ್ನಣೆ ಈ ರಂಗಕ್ಕೆ ದೊರೆತಿಲ್ಲ. ಈ ಕಲೆ ಕನ್ನಡದ ವಿವಿಧ ಪ್ರದೇಶಗಳಿಗೆ, ವಿಶೇಷತಃ ಸಾಹಿತ್ಯ, ಸಂಸ್ಕೃತಿ ರಂಗಗಳ ಸಕ್ರಿಯ ವ್ಯಕ್ತಿಗಳ ಮುಂದೆ ಇನ್ನೂ ಪ್ರದರ್ಶಿತವಾಗಿಲ್ಲ. ಈ ಪ್ರಚಾರ, ಇದರ ಬೆಳವಣಿಗೆಗೆ ಬಹಳ ಆವಶ್ಯಕವಾಗಿದೆ.

೧೧

ತಾಳಮದ್ದಳೆಯಾಗಲಿ, ಯಕ್ಷಗಾನದ ಆಟವಾಗಲಿ, ಸರಿಯಾದ ವಿಮರ್ಶೆ, ವಿಶ್ಲೇಷಣೆ ಮತ್ತು ಮಾನ್ಯತೆಗೆ ಪಾತ್ರವಾಗಬೇಕಾದರೆ ಅದನ್ನು ಒಂದು 'ಜಾನಪದ ಮಾದರಿ'ಯೆಂದೋ, ಒಂದು ಮ್ಯೂಸಿಯಂ ಮಾದರಿಯೆಂದೋ ನೋಡಬಾರದು. ಸಹಾನುಭೂತಿಪರ, ಪ್ರೋತ್ಸಾಹಕ ದೃಷ್ಟಿಯಿಂದಲೇ ಗ್ರಹಿಸಲೂಬಾರದು. ಅದನ್ನು ಸಹಜ ಸಂದರ್ಭದಲ್ಲಿ ನೋಡಬೇಕು. ಕಲಾಪ್ರಕಾರವೆಂದು ನೋಡಬೇಕಾದುದು ಮುಖ್ಯ. ಸಾಮಾಜಿಕ ಸಂವಹನವಾಗಿ, ಸಾಂಸ್ಕೃತಿಕವಾಗಿ ಕ್ರಿಯಾತ್ಮಕವಾದ ಜೀವಂತ ಪ್ರಕಾರವಾಗಿ, ವಸ್ತುವಿನ ಘನವಾದ ಪುನಸೃಷ್ಟಿಯಾಗಿ ಅದು ಹೇಗಿದೆ, ಎಷ್ಟು ಸಫಲವಾಗಿದೆ ಎಂದು ವಿವೇಚಿಸಬೇಕು. ವ್ಯಕ್ತಿಶಃ ಕಲಾವಿದರ ಸಾಧನೆಗಳನ್ನು ಈ ನಿಟ್ಟಿನಲ್ಲಿ ಪರಿಶೀಲಿಸಬೇಕು.

ತಾಳಮದ್ದಳೆಯು ಇನ್ನಷ್ಟು ಸಶಕ್ತವಾಗಲು, ಅದರಲ್ಲಿ ಪ್ರಸಂಗರಚನೆಯಲ್ಲಿ ವಸ್ತುವೈವಿಧ್ಯವೂ, ಪ್ರಾಯೋಗಿಕವಾಗಿ - ಹೊಸ ಹೊಸ ಆಶಯಗಳೂ ಬೆಳೆದುಬರಬೇಕು. ರಾಮಾಯಣ ಭಾರತಾದಿಗಳ ಕಥಾನಕಗಳಲ್ಲಿ, ಮೂಲ ಸಂಸ್ಕೃತ ಕಾವ್ಯಗಳನ್ನು ಆಧರಿಸಿ ಪ್ರಸಂಗಗಳ ರಚನೆಯಾದರೆ, ವಸ್ತುವಿನ ಮತ್ತು ಜೀವನದರ್ಶನದ ಗಟ್ಟಿತನ ಹೆಚ್ಚುವುದು.