ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦ / ವಾಗರ್ಥ

ಪ್ರಸಿದ್ಧ ನಟ ಆರ್ನೆಸ್ಟೋರುಸ್ಸಿ ಹೇಳುವಂತೆ: “ನಟನು ಕವಿಗಳಿಗೆ ಅಡಿಯಾಳಲ್ಲ. ಅವನು ಸ್ವತಂತ್ರನು". ವಾದ್ಯ ಮತ್ತು ಅದನ್ನು ನುಡಿಸು ವವನು ಎರಡೂ ನಟನೇ, ಈ ತತ್ವಗಳ ಅನ್ವಯವು ಅರ್ಥಗಾರಿಕೆಯಲ್ಲಿ ವ್ಯಾಪಕವಾಗಿ ಆಗಿರುವುದನ್ನು ಕಾಣುತ್ತೇವೆ. ಅರ್ಥಗಾರಿಕೆಯು ಪ್ರಸಂಗಕ್ಕೆ ನಿಷ್ಠವಾಗಿರಬೇಕು ಎಂದು ಕೇಳುತ್ತೇವೆ. ಹಾಗೆ ಹೇಳುವುದು ಸುಲಭ. ಆದರೆ, ಪ್ರಸಂಗಕ್ಕೆ ನಿಷ್ಠವಾಗಿ ಅನುವಾದ ಮಾಡಿಕೊಡುವುದೇ ಅರ್ಥದಾರಿಯ ಕೆಲಸವೆ? ಅಲ್ಲ; ಅವನು ಸೃಜನಶೀಲನಾಗಿ, ಪ್ರಸಂಗಕ್ಕೆ ಸಂವಾದಿಯಾಗಿ ಪ್ರತಿಕಾವ್ಯವನ್ನೇ ಸೃಷ್ಟಿಸಬೇಕೆ? ಎಂಬುದನ್ನು ಪರಿಶೀಲಿಸ ಬೇಕು. ಕೇವಲ ಅನುಕರಣಶೀಲನು ಮಾಡುವುದು ಪ್ರಸಂಗದ ನಿರ್ವಹಣೆ. ಇದು ಮಿಮಿಕ್ರಿಗಿಂತ ಮುಂದಿನ ಹಂತ ಮಾತ್ರ. ಮೂಲ ಪ್ರಸಂಗ ಮತ್ತು ಅರ್ಥಗಾರಿಕೆಗಳೊಳಗಿನ ತಿಕ್ಕಾಟದ ಪ್ರಶ್ನೆಯನ್ನು ಮೌಲಿಕ ಪ್ರತಿಭೆಯುಳ್ಳ ಕಲಾವಿದನು ತನ್ನದೇ ಆದ ರೀತಿಯಲ್ಲಿ ಪರಿಹರಿಸುತ್ತಾನೆ. ತಾನು ಮಾಡುತ್ತಿರುವುದು ಏನು ಎಂಬುದು ಅವನಿಗೆ ಗೊತ್ತಿಲ್ಲದಿರಬಹುದು. ಆದರೆ, ಅವನು ಸೃಜನಶೀಲನೂ, ವ್ಯಾಖ್ಯಾನ ಕಾರನೂ ಎರಡೂ ಆಗಿ, ರಸಾವಿಷ್ಕಾರವನ್ನು ಸಾಧಿಸುತ್ತ ಕಲ್ಪನೆಗಳನ್ನೂ, ಫಕ್ಕನೆ ಹೊಳೆಯುವ ಅಂತಃಸ್ಫೂರ್ತ ನೋಟಗಳನ್ನೂ ಬಳಸಿ, ಉತ್ಕೃಷ್ಟ ವಾದ 'ಅರ್ಥಕಾವ್ಯ'ವನ್ನು ಸೃಷ್ಟಿಸುತ್ತಾನೆ. ಆಗ ಅವನು ಪ್ರಸಂಗವನ್ನು ಮೀರಿಯೂ ಮೀರದಿರುತ್ತಾನೆ. ಏಕೆಂದರೆ, ಪ್ರಸಂಗವು ಆಸ್ಪದವನ್ನೇ ನೀಡದ ಹಂತಕ್ಕೆ ಅರ್ಥಗಾರಿಕೆ ವಿಸ್ತರಿಸಿದರೆ ಅದು ಕಲೆಗಾರಿಕೆ ಎಂದಾಗುವುದಿಲ್ಲ. ಹೀಗೆ, ಅವನು ಸಾಧಿಸುವ ಪ್ರಸಂಗಾತೀತ ಪ್ರಸಂಗೋಚಿತ ವಾಕ್‌ಸಿದ್ಧಿಯು, ಅವನ ವ್ಯಕ್ತಿತ್ವದಲ್ಲಿರುವ ಶಕ್ತಿಗಳ ಪ್ರತಿಫಲನವೇ ಆಗಿರುತ್ತದೆ.

ಪೌರಾಣಿಕ ಪಾತ್ರಗಳು ಜನಸಾಮಾನ್ಯರಲ್ಲ. ರಾಜರಾಣಿಯರು, ದೇವತೆಗಳು, ರಾಕ್ಷಸ ಗಂಧರ್ವರು. ಇಂದು ನಾವು ಕಾಣುವ ಉಚ್ಚ ವರ್ಗಗಳಿಗೂ ಕೂಡ ಈ ಪಾತ್ರಗಳಲ್ಲಿ ಸಾಮ್ಯ ಕಡಿಮೆ. ಹಾಗಾಗಿ ಈ ಪಾತ್ರಗಳು ರಮ್ಯಾದ್ಭುತ, ಕಾಲ್ಪನಿಕ ಪ್ರಪಂಚಕ್ಕೆ ಸೇರಿದವುಗಳು. ಆದರೆ, ಅವುಗಳನ್ನು ಕಲ್ಪಿಸಿ ಚಿತ್ರಿಸುವ ನಾವು ಇಂದಿನವರು; ಸಾಮಾನ್ಯರು. ಹಾಗಾಗಿ ನಮ್ಮ ಪ್ರೇರಣೆಗಳು ನಮ್ಮವೇ. ಅಂದರೆ ಅವುಗಳಲ್ಲಿ ಈ ಅಂಶಗಳಿವೆ. ನಮ್ಮ ಕಥಾಪರಿಜ್ಞಾನ, ಇತರ ವಿಷಯಗಳ ಜ್ಞಾನ,