ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨ / ವಾಗರ್ಥ

ಅರ್ಥಗಾರಿಕೆಯು ನಮ್ಮನ್ನು ಪೌರಾಣಿಕ ಕಾಲಕ್ಕೆ ಕೊಂಡೊಯ್ಯ ಬೇಕು ಎಂಬ ಮಾತೊಂದನ್ನು ಆಗಾಗ ಕೇಳುತ್ತೇವೆ; ನಿಜ, ಕಥೆಯ ವಸ್ತು ನಾವು ಬದುಕುತ್ತಿರುವ ಕಾಲದ್ದಲ್ಲ; ಹಿಂದಿನದು. ಬರುವ ಮೌಲ್ಯಗಳೊ, ದೃಷ್ಟಾಂತಗಳೊ, ವ್ಯಕ್ತಿಸ್ವಭಾವಗಳೋ ಬೇರೊಂದು ಸನ್ನಿವೇಶವನ್ನು ನಮ್ಮ ಮುಂದೆ ತೆರೆದಿರಿಸಬೇಕು. ಅರ್ಥವನ್ನು ಕೇಳುವಾಗ, ವಾಚ್ಯಾರ್ಥ ದಲ್ಲಿ ನಮ್ಮ ಊರಿನ ನೆನಪಾಗಬಾರದು- ಎಂಬ ಅರ್ಥದಲ್ಲಿ ಇದು ಸರಿ. ಆದರೆ, ಇನ್ನೊಂದು ಮುಖದಲ್ಲಿ 'ಅಂದಿನ ಕಾಲಕ್ಕೆ ಕೊಂಡೊಯ್ಯುವುದು' ಎಂಬುದೇ ಒಂದು ಅಸಾಧ್ಯವಾದ ವಿಷಯ. ನಮ್ಮ ಬದುಕು, ಜೀವನಾನುಭವ, ಪದಪ್ರಯೋಗ ಎಲ್ಲವೂ ಹಲವು ಶತಮಾನಗಳ ಜನಾಂಗೀಯ ಅನುಭವಗಳ ಫಲವಾಗಿದೆ. ಆದುದರಿಂದ ಯಾವುದೇ ಚಿತ್ರಣವೂ, ನಮ್ಮ ನಮ್ಮ ಯುಗಧರ್ಮಗಳನ್ನು ದಾಟಿ ಹೋಗ ಲಾರದು. ಹಾಗಾಗಿ ಪುರಾಣವನ್ನು 'ಇಂದಿನ ಕಾಲಕ್ಕೆ ತರಬೇಕು' ಎಂಬುದೂ ಸತ್ಯವೇ.

ಪ್ರಾಚೀನ ಅಥವಾ 'ಕ್ಲಾಸಿಕಲ್' ವಸ್ತುವಿನ ವಿವಿಧ ರೂಪಗಳ ಪ್ರದರ್ಶನಗಳು ಶತಮಾನಗಳ ಕಾಲ ಆಗುತ್ತ ಬಂದಿದೆಯಷ್ಟೆ. ಇಲ್ಲಿ ವ್ಯಕ್ತಿಗತವಾದ ಭಿನ್ನತೆಯ ಜೊತೆ- ಕಾಲ, ದೇಶ, ಸಂದರ್ಭ, ಅರ್ಥಾತ್ ಸಾಮಾಜಿಕ ಬದಲಾವಣೆಗಳನ್ನು ಪ್ರತಿಫಲಿಸುತ್ತ ಬರುತ್ತವೆ. ವಿಚಾರಗಳು ಕಾಲದ ಉತ್ಪನ್ನಗಳು, ವ್ಯಕ್ತಿಯೂ ಕಾಲದ ಶಿಶು. ಹೀಗಾಗಿ, ಸೃಜನಕ್ರಿಯೆ ಯಲ್ಲಿನ ಕಾಲಾನುಗುಣ ಪರಿವರ್ತನೆಯು, ವ್ಯಕ್ತಿಗಳ ಮೂಲಕ ಸಂಬಂಧಿತ ಮಾಧ್ಯಮದಲ್ಲಿ ಸೇರಿಕೊಳ್ಳುತ್ತದೆ.

ತಾಳಮದ್ದಳೆಯು ವ್ಯಕ್ತಿ ಆಧಾರಿತ ಕಲೆ ಅಥವಾ ನಟಪ್ರಧಾನ ಕಲೆ ಎಂದು ಹಿಂದೆ ಪ್ರಸ್ತಾವಿಸಿದೆಯಷ್ಟೆ. ಪ್ರೇಕ್ಷಕನು ಮೊದಲಾಗಿ ಗುರುತಿಸು ವುದು 'ಇಂತಹ' ವ್ಯಕ್ತಿಯನ್ನು, ಅನಂತರ ಪಾತ್ರವನ್ನು. ಪ್ರದರ್ಶನಾ ನಂತರ ನಡೆಯುವ ಮೌಖಿಕ ವಿಮರ್ಶೆ, ಚರ್ಚೆಗಳು ಪಾತ್ರಧಾರಿ ಗಳನ್ನಾಧರಿಸಿಯೇ ಇರುತ್ತವೆ. ಪ್ರೇಕ್ಷಕರಲ್ಲೂ, ವ್ಯವಸ್ಥಾಪಕರಲ್ಲೂ ಕಲಾವಿದರ ಸ್ಥಾನಗಳ ಒಂದು ಸ್ಥಾನನಿರ್ದೇಶ ಸರಣಿ (hierarchy) ಇರುತ್ತದೆ. ಪಾತ್ರಗಳ ಹಂಚುವಿಕೆ ಇದರ ಮೇಲಿಂದಲೇ ಆಗುತ್ತದೆ.