ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬ / ವಾಗರ್ಥ

ವಾದ, ಸಂವಾದಗಳಲ್ಲಿ ಸಾಮಾನ್ಯವಾಗಿ ಪ್ರೇಕ್ಷಕ ಪ್ರತಿಕ್ರಿಯೆ ಸಕ್ರಿಯವಾಗಿರುವುದುಂಟು. ಈ ಪ್ರತಿಕ್ರಿಯೆ ತನಗಾಗಲಿ, ಇದಿರಾಳಿಗಾಗಲಿ (ನಗೆ, ಚಪ್ಪಾಳೆ ಇತ್ಯಾದಿ) ಒಬ್ಬೊಬ್ಬ ಕಲಾವಿದನ ಮೇಲೆ ಒಂದೊಂದು ಪರಿಣಾಮವನ್ನು ಮಾಡಬಹುದು. ಒಬ್ಬನು ಅದನ್ನು ತಾನೂ ಪಡೆಯಲು ಯತ್ನಿಸಬಹುದು. ಮತ್ತೊಬ್ಬನು ಅದನ್ನು ನಗಣ್ಯ ಮಾಡಬಹುದು. ಒಬ್ಬನು ಅದರಿಂದ ಉದ್ರಿಕ್ತನಾಗಬಹುದು. ಇಲ್ಲೆಲ್ಲ ವ್ಯಕ್ತಿಯೇ ಪಾತ್ರ, ಪಾತ್ರವೇ ವ್ಯಕ್ತಿ, ವ್ಯತ್ಯಾಸ ನಾಶವಾಗಿರುತ್ತದೆ.

೧೧

ವ್ಯಕ್ತಿಸ್ವಭಾವ ಮತ್ತು ಪಾತ್ರ ವಿತರಣೆಗಳಿಗೆ ಸಂಬಂಧಿಸಿ, ಕಲಾವಿದ ರಲ್ಲಿ, ಪ್ರೇಕ್ಷಕರಲ್ಲಿ, ಸಂಘಟಕರಲ್ಲಿ ಕೆಲವು ಗ್ರಹಿಕೆಗಳು, ಅನ್ವಯ ಕಲ್ಪನೆಗಳೂ ಇವೆ. ಮತ್ತು ಇವು ವಿಶೇಷತಃ ತಾಳಮದ್ದಳೆಯ ಕ್ಷೇತ್ರ ದಲ್ಲಿ ಬಹಳ ಮುಖ್ಯವಾಗಿವೆ. ಅವುಗಳಿಗೆ ಔಚಿತ್ಯವೂ ಇದೆ. ಭೀಷ್ಮ, ದಶರಥ, ರುಕ್ಮಾoಗದ ಇಂತಹ ಪಾತ್ರಗಳನ್ನು ನೀಡುವಾಗ ರಂಗದ ಹಿರಿತನ (seniority) ಅಥವಾ ಪ್ರಸಿದ್ದಿಯೊಂದೇ ಮಾನದಂಡವಾಗುವು ದಿಲ್ಲ. ವಿಶಿಷ್ಟ ರೀತಿಯ ಸ್ವರ, ಅಭಿವ್ಯಕ್ತಿ ವಿಧಾನ, ಮಾತಿನ ಕ್ರಮ ಗಳಿಗೂ ಮಹತ್ವಯಿದೆ. "ಪಾತ್ರ ಹಿಡಿಸುವುದು” ಎಂಬ ಪರಿಕಲ್ಪನೆ ಇದು. (ಉದಾ : ಹಿರಿಯ ಅರ್ಥದಾರಿಗಳಾದ ಶ್ರೀ ಕಾಂತ ರೈ ಅವರಿಗೆ ರಾವಣ, ಮಾಗಧರ ಪಾತ್ರಗಳು ಹೊಂದುವುದಿಲ್ಲ. ಶ್ರೀ ಕುಂಬಳೆ ಸುಂದರ ರಾವ್ ಹಿರಿಯ ಕಲಾವಿದರಾದರೂ, ಸಂಧಾನದ ಕೌರವ, ಪರ್ವದ ಕರ್ಣ, ಮಾಗಧ ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದು ವಿರಳ. ಈ ಲೇಖಕನಿಗೆ ಪರ್ವದ ಭೀಷ್ಮನಂತಹ ಪಾತ್ರ ಅಷ್ಟು ಹೊಂದುವುದಿಲ್ಲ). ಎಲ್ಲ ಬಗೆಯ ಪಾತ್ರಗಳನ್ನೂ ತಕ್ಕಮಟ್ಟಿಗೆ ಚೆನ್ನಾಗಿಯೇ ನಿರ್ವಹಿಸಬಲ್ಲ ಒಂದು ಬಗೆಯ ಮಧ್ಯಮ ರೀತಿಯ ಅಭಿವ್ಯಕ್ತಿ ವಿಧಾನವುಳ್ಳ ಕಲಾವಿದರಿದ್ದಾರೆ. (ಉದಾ : ಎಂ. ಆರ್. ಲಕ್ಷ್ಮೀನಾರಾಯಣ, ಮಂಜುನಾಥ ಭಂಡಾರಿ, ಕೆ. ಗೋವಿಂದ ಭಟ್ಟ).

ಸ್ತ್ರೀಪಾತ್ರಗಳ ವಿಚಾರದಲ್ಲಿ ನಟ-ಪಾತ್ರ ಸಂಬಂಧ ಪ್ರತ್ಯೇಕ ಪರಿಶೀಲನೆಗೆ ಅರ್ಹವಾದದ್ದು. ಸ್ತ್ರೀವೇಷಧಾರಿಗಳಿದ್ದಂತೆ ಸ್ತ್ರೀಪಾತ್ರಗಳ ಅರ್ಥದಾರಿಗಳೆಂದೇ ಗಣನೆಗೊಳ್ಳುವ ಅರ್ಥದಾರಿಗಳಿದ್ದಾರೆ. ಸ್ತ್ರೀ ಪಾತ್ರಕ್ಕೆ ಸರಿಯಾಗಿ ಹೊಂದುವ ಸ್ವರ ಮತ್ತು ಸ್ತ್ರೀ ಭಾವಾಭಿವ್ಯಕ್ತಿಯಲ್ಲಿ