ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦ / ವಾಗರ್ಥ

ತಾನು ಕೃಷ್ಣನಲ್ಲೂ ಕೂಡ ಹೋರಾಡಿದ ಧೀರ, ಆತ್ಮರಕ್ಷಣೆಗಾಗಿ ಕೃಷ್ಣನನ್ನು ಎದಿರು ಹಾಕಿಕೊಂಡವನು ಎಂದೇನಾದರೂ ಹೇಳುತ್ತಾನ ಎಂದಿಟ್ಟುಕೊಳ್ಳೋಣ. ಕೃಷ್ಣಾರ್ಜುನ ಯುದ್ಧ- 'ಗಯ ಚರಿತ್ರೆ' ಕಾವ್ಯದ್ದು, ಪ್ರಸಂಗ ರೂಪದಲ್ಲೂ ಇದೆ. ವ್ಯಾಸ, ಕುಮಾರವ್ಯಾಸ, ಪಂಪ ಇತ್ಯಾದಿ ಪ್ರಮುಖ ಭಾರತಗಳಲ್ಲಿ ಎಲ್ಲೂ ಇಲ್ಲ- ಎಂಬುದನ್ನು ಆಧರಿಸಿ, ಕೃಷ್ಣಾರ್ಜುನ ಕಾಳಗವೇ ಕಟ್ಟುಕತೆ ಎಂದು ಇದಿರಾಳಿ ವಾದಿಸುವಂತಿಲ್ಲ. ಯುಕ್ತಿಯಿಂದ ಆಕ್ಷೇಪಿಸಬಹುದು! ಅದು"ಕೃಷ್ಣಾರ್ಜುನರ ನಾಟಕ, ನಿಜವಾದ ಯುದ್ಧವಲ್ಲ, ಅರ್ಜುನನ ಯೋಗ್ಯತೆಗೆ ಅದು ಮಾನದಂಡ ವಲ್ಲ " ಎಂದು ಬೇಕಾದರೆ ಹೇಳಬಹುದು.

ವ್ಯಾಸಭಾರತದ ಕರ್ಣಪರ್ವದಲ್ಲಿ ಕರ್ಣನು ಸಾಯುವಾಗ, ಶಲ್ಯನು ಸಾರಥಿಯಾಗಿಯೇ ಇರುತ್ತಾನೆ. ಕುಮಾರವ್ಯಾಸನಲ್ಲಿ ಶಲ್ಯನು ಬಿಟ್ಟು ಹೋದ ಮೇಲೆ ಏಕಾಂಗಿಯಾದ ಕರ್ಣನ ವಧೆ, ಅದೂ ಕೃಷ್ಣನು ಕರ್ಣಕುಂಡಲವನ್ನು ಬೇಡಿ ಪಡೆದ ಮೇಲೆ ನಡೆಯುತ್ತದೆ. ಮುಂದೆ, ಸುಧನ್ವಾರ್ಜುನ ಸಂವಾದದಲ್ಲಿ ಈ ಪ್ರಸ್ತಾಪ ಬಂದರೆ, ಯಾವ ಆಕರವು ಪ್ರಮಾಣ? ಎಂದರೆ ಮೊದಲಿಗೆ ಒಬ್ಬನಿಂದ ಯಾವುದು ಉಲ್ಲೇಖಿ ಸಲ್ಪಡುತ್ತದೋ ಅದೇ ಪ್ರಮಾಣ. ಅದನ್ನು ಪ್ರಶ್ನಿಸದೆ ಯುಕ್ತಿಗಳನ್ನು ಹೂಡಬಹುದು ಅಷ್ಟೆ.

ಇಂತಹ ಉದಾಹರಣೆಗಳನ್ನು ಎಷ್ಟೂ ಬೆಳೆಸಬಹುದು. ಮುಖ್ಯ ವಿಚಾರವಿಷ್ಟೆ, ಸಹಪಾತ್ರಧಾರಿಯು ಎತ್ತಿಕೊಂಡ ಆಕರವನ್ನೆ ಅಲ್ಲಗಳೆಯು ವುದು ಅರ್ಥಗಾರಿಕೆಯ ನೀತಿಯಲ್ಲ. ಅದು ನಾಟಕ ಧರ್ಮಕ್ಕೂ ಸರಿಯಲ್ಲ. ಆಕರಗಳ ಸಾಧುತ್ವದ ಚರ್ಚೆ ಮುಖ್ಯವಲ್ಲ. ಸಮನ್ವಿತವಾದ ನಿರ್ವಹಣೆಯ ಮೂಲಕ ಪ್ರದರ್ಶನವೇ ಮುಖ್ಯವಾದುದು.

ಆದರೆ ಇದಕ್ಕೆ ಅಪವಾದಗಳೂ ಇವೆ. ತೀರ ಭಿನ್ನ ಪರಂಪರೆಯ, ಪ್ರಸಂಗದ ಕಥಾಸರಣಿಗೆ ಹೊಂದಿಕೆಯಾಗದ ವಿವರವನ್ನು ಒಬ್ಬನು ತಂದರೆ, ತೊಂದರೆಯಾಗುತ್ತದೆ. ಪಂಪ ರಾಮಾಯಣದಲ್ಲಿ ರಾವಣನನ್ನು ಕೊಂದವನು ಲಕ್ಷ್ಮಣನೇ ಹೊರತು ರಾಮನಲ್ಲ. ಈ ವಿಚಾರವನ್ನು ಒಬ್ಬನು ಎತ್ತಿ ಹಾಕಿದರೆ, ಹೊಂದಿಸಲು ಅಸಾಧ್ಯ. ಕಾರಣ, ಪ್ರಚಲಿತ ಪ್ರಸಂಗ ಸರಣಿಗೆ ಅದು ತೀರ ವಿರುದ್ಧವಾದದ್ದು. ವರ್ಣನಾತ್ಮಕ ವಿವರ ವನ್ನು ಯಾವುದೇ ಪರಂಪರೆಯಿಂದ ತೆಗೆದುಕೊಂಡರೂ ತೊಡಕಾಗದು. ಶೂರ್ಪನಖಿಗೆ ಪಂಪ ರಾಮಾಯಣದಲ್ಲಿ 'ಚಂದ್ರನಖಿ' ಎಂಬ ಹೆಸರು.