ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ಆಗಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಮತ್ತು ಅದು ನನ್ನ ವೃತ್ತಿಕ್ಷೇತ್ರವನ್ನೂ ಒಳಗೊಂಡಿದೆ. ಅವರ ಮಡದಿ ಸುಚೇತಾ ಜೋಶಿ ಒಬ್ಬ ಭಾರತೀಯ ಸಂಸ್ಕೃತಿಯ ಸದ್ಗೃಹಿಣಿ, ನನ್ನ ಶ್ರೀಮತಿಯ ಅಚ್ಚುಮೆಚ್ಚಿನ ಗೆಳತಿ, ಈಗ ಅಮೇರಿಕಾದಲ್ಲಿ ನೆಲೆಸಿರುವ ಇಬ್ಬರು ಮಕ್ಕಳೂ ಅಷ್ಟೇ - ಜೋಶಿ ಕುಟುಂಬದ ಸಂಪತ್ತು. ಆಗಾಗ ನೆನಪಿಸಿಕೊಳ್ಳುವವರು. ಎಳವೆಯಲ್ಲಿ ಕಂಡಾಗಲೆಲ್ಲ ಪ್ರೀತಿಯಿಂದ ಗೌರವದಿಂದ ಮಾತಾಡಿಸುವವರು. ಮನುಷ್ಯನಿಗೆ ಇದಕ್ಕಿಂತಲೂ ಹೆಚ್ಚಿಗೆ ಇನ್ನೇನು ಬೇಕು?

ಇಷ್ಟಿದ್ದರೂ ಜೋಶಿಯವರೂ ನಾನೂ ಸಮೀಪವರ್ತಿಗಳಾದದ್ದು ಯಕ್ಷಗಾನದ ಮೂಲಕವೇ. ಅದೂ ಅರ್ಥಗಾರಿಕೆಯ ಮೂಲಕವೇ. ಕಾವ್ಯ ಮತ್ತು ಅರ್ಥಗಾರಿಕೆ ನನ್ನ ಅತ್ಯಂತ ಪ್ರೀತಿಯ ಎರಡು ಅಭಿವ್ಯಕ್ತಿಯ ಮಾಧ್ಯಮಗಳಾದ್ದರಿಂದ ಆ ಎರಡನ್ನೂ ಆಸ್ವಾದಿಸುವ ಅವಕಾಶಗಳನ್ನು ನಾನು ಕಳಕೊಳ್ಳುವುದಿಲ್ಲ. ನನ್ನ ವೃತ್ತಿಯ ಮಿತಿಯಲ್ಲಿ ಈ ಆಸಕ್ತಿಯನ್ನು ನಿರ್ಬಂಧಿಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಬೇರೆಯೇ ಒಂದು ವಿಷಯ.

ಹಿಂದೊಮ್ಮೆ ಮಂಗಳೂರಿಗೆ ಹೋಗಿದ್ದಾಗ ಶೇಣಿ, ದೇರಾಜೆ, ಪೆರ್ಲ ಮೊದಲಾದ ದೊಡ್ಡ ಅರ್ಥಧಾರಿಗಳ ಕೂಟವೊಂದರಲ್ಲಿ ವೇದಿಕೆಯಲ್ಲಿದ್ದ ಜೋಶಿಯವರನ್ನು ನೋಡಿದೆ. ಆ ಕ್ಷಣಕ್ಕೆ ತರುಣ ಜೋಶಿಯವರಿಂದ ಏನೋ ಒಂದು ರೀತಿಯ ಆಕರ್ಷಣೆಗೆ ಒಳಗಾದೆ. Love at first sight ಎನ್ನುತ್ತಾರಲ್ಲ ಹಾಗೆ.

ಆ ದಿವಸ 'ದಂತಭಗ್ನ'ರಾಗಿ (ಅವರ ಹಲ್ಲಿನ ಸೆಟ್ ತೊಂದರೆ ಕೊಟ್ಟಿತ್ತು) ಪೆರ್ಲ ಕೃಷ್ಣ ಭಟ್ಟರು ಪದ್ಯದ ನಡುವೆಯೇ ವೇದಿಕೆಯಿಂದ ನಿರ್ಗಮಿಸಬೇಕಾಗಿ ಬಂತು. ಆಗ ಸಂಘಟಕರು ಬಹುಶಃ ಪೊಳಲಿ ಬಾಲಕೃಷ್ಣ ಶೆಟ್ಟಿ ಅವರಿರಬೇಕು 'ಮುಂದೆ ಅರ್ಜುನನ ಪಾತ್ರವನ್ನು ಜೋಶಿಯವರು ನಿರ್ವಹಿಸುತ್ತಾರೆ' ಎಂದು ಘೋಷಿಸಿದರು. ನಿರೀಕ್ಷೆ ಇಲ್ಲದೆ, ಒಲ್ಲದ ಮನಸ್ಸಿನಿಂದ ವೇದಿಕೆಯನ್ನೇರಿದ ಜೋಶಿಯವರು ಪ್ರೇಕ್ಷಕರಿಗೆ ನಿರಾಶೆ ಯಾಗದಂತೆ, ಒಳ್ಳೆಯ ಅರ್ಥಗಾರಿಕೆಗೆ ಹೆಸರಾದ ಉಡುವೆಕೋಡಿಯವರ ಹನೂಮಂತನಿಗೆ ಅರ್ಜುನನಾಗಿ ಪ್ರಸಂಗವನ್ನು ಸುಗಮವಾಗಿ ಮುಕ್ತಾಯಕ್ಕೆ ಮುಟ್ಟಿಸಿದರು. ನಾನು ಅವರಲ್ಲಿ ಒಬ್ಬ ಭರವಸೆ ಹುಟ್ಟಿಸುವ ಉದಯೋನ್ಮುಖ ಕಲಾವಿದನನ್ನು ಅಂದೇ ಗುರುತಿಸಿದೆ.

ನಿಜಕ್ಕೂ ನಾವು ಒಂದೇ ವೇದಿಕೆಯನ್ನು ಹಂಚಿಕೊಂಡದ್ದು ಪೆರ್ಲಂಪಾಡಿಯ ನಮ್ಮ ಭಾವನ ಮನೆಯಲ್ಲಿ (1972). ಆ ದಿನ ನನ್ನ ತಂದೆಯವರ ಅತಿಕಾಯನಿಗೆ ಜೋಶಿ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದರು. ಅಂಗಧ ಸಂಧಾನದಲ್ಲಿ ದಿವಂಗತ ಯು.ಬಿ. ಗೋವಿಂದಯ್ಯ (ಅಂಗದ) ಮತ್ತು ನಾನು (ಪ್ರಹಸ್ತ) ಭಾಗವಹಿಸಿದ್ದೆವು.

ಇದೆಲ್ಲ ನಡೆದದ್ದು 1960-70ರ ದಶಕದಲ್ಲಿ ನೇತ್ರಾವತಿ ನದಿಯಲ್ಲಿ ಆಮೇಲೆ ಬೇಕಾದಷ್ಟು ನೀರು ಹರಿದುಹೋಗಿದೆ. ಆದರೆ ನಮ್ಮಿಬ್ಬರ ನಡುವಣ ಸ್ನೇಹ ಮಾತ್ರ

ವಾಗರ್ಥ ಗೌರವ / 2