ಈ ಪುಟವನ್ನು ಪ್ರಕಟಿಸಲಾಗಿದೆ
ಡಾ। ಜೋಷಿ ಹಲವರು ಕಂಡಂತೆ
ವೆಂಕಟರಾಮ ಭಟ್ಟ, ಸುಳ್ಯ
ಡಾ. ಎಂ. ಪ್ರಭಾಕರ ಜೋಷಿಯವರದು ಒಂದು ವಿಶಿಷ್ಠ ವ್ಯಕ್ತಿತ್ವ, ಬರಹಗಾರನಾಗಿ, ಭಾಷಣಗಾರನಾಗಿ, ಯಕ್ಷಗಾನ ಅರ್ಥಧಾರಿಯಾಗಿ, ವಿಮರ್ಶಕನಾಗಿ, ಪ್ರಾಧ್ಯಾಪಕನಾಗಿ, ಸಂಘಟಕನಾಗಿ ಅವರಿಟ್ಟ ಹೆಜ್ಜೆ ವ್ಯಾಪಕವಾದುದು. ಸಂದ ಸನ್ಮಾನಗಳು ಹಲವು. ಅರಸುತ್ತಿರುವವುಗಳು ಇನ್ನೆಷ್ಟೋ! ಅತಿಶಯೋಕ್ತಿಗಳ ಆಡಂಬರವನ್ನು ಮಾತಿನಲ್ಲೂ, ಬದುಕಿನಲ್ಲೂ, ಬರಹದಲ್ಲೂ ಒಲ್ಲದ ಜೋಷಿಗೆ ಮೈಸೂರಿನಲ್ಲೊಂದು ಒಲವಿನ ಗೌರವ. ಅದಕ್ಕಾಗಿಯೇ 'ಡಾ| ಎಂ. ಪ್ರಭಾಕರ ಜೋಷಿ ಅಭಿನಂದನ ಸಮಿತಿ'ಯಿಂದ 'ಜೋಷಿ ವಾಗರ್ಥ ಗೌರವ'ವೆಂಬ ಕಲಾಪಗುಚ್ಛ, ಮೈಸೂರಿನ ಜಗಮೋಹನ ಅರಮನೆಯ ಸಭಾಂಗಣದಲ್ಲಿ ಮೇ 13 ಮತ್ತು 14ನೆಯ ದಿನಾಂಕದಂದು ಸಂವಾದ, ಯಕ್ಷಗಾನ ತಾಳಮದ್ದಳೆ, ವಿಚಾರಸಂಕಿರಣ, ಗೌರವಾರ್ಪಣೆ, ಬಯಲಾಟಗಳು ಎರಡು ದಿನ ಬಿತ್ತರಗೊಂಡವು. ಯಕ್ಷಗಾನದ ಅರ್ಥಧಾರಿ, ಬರೆಹಗಾರ, ವೇದವಿದ ವಿದ್ವಾನ್ ಗನಾ ಭಟ್ಟರ ಯೋಚನೆ, ಯೋಜನೆ, ದಿಗ್ದರ್ಶನಕ್ಕೆ ಬಳಗದ ಎಲ್ಲರು ಒಮ್ಮನದಿಂದ ಕೈ ಜೋಡಿಸಿದರು.