ಡಾ. ಎಂ. ಪ್ರಭಾಕರ ಜೋಶಿಯವರ
ಸಾಮಾಜಿಕ ವ್ಯಕ್ತಿತ್ವ ಮತ್ತು ಸ್ನೇಹಸಂಪರ್ಕ
ಡಾ. ಚಂದ್ರಶೇಖರ ದಾಮ್ಲ
ಬಹುಮುಖೀ ವ್ಯಕ್ತಿತ್ವದ ಸಾಧಕರೆಂಬ ಹಿರಿಮೆ ಎಲ್ಲರಿಗೂ ದಕ್ಕುವುದಿಲ್ಲ. ಕೆಲವರು ಕೇವಲ ಕೃಷಿಕರಾಗಿರುತ್ತಾರೆ, ಕೆಲವರು ವ್ಯಾಪಾರಿಗಳಾಗಿರುತ್ತಾರೆ. ಇನ್ನು ಕೆಲವರು ಅಧಿಕಾರಿಗಳಾಗಿರುತ್ತಾರೆ. ಮತ್ತೆ ಕೆಲವರು ಉತ್ತಮ ಶಿಕ್ಷಕರಾಗಿರುತ್ತಾರೆ, ಕೆಲವರು ಕಲಾವಿದರು ಮಾತ್ರ ಆಗಿರುತ್ತಾರೆ. ಅವರು ತಮ್ಮ ಸುತ್ತಲೂ ಒಂದು ಪರಿಧಿಯನ್ನು ಅಂದರೆ ಬೇಲಿಯನ್ನು ನಿರ್ಮಿಸಿಕೊಂಡಿರುತ್ತಾರೆ. ಆ ಬೇಲಿಯಿಂದಾಚೆಗೆ ಅವರು ದಾಟಲಾರರು, ಹಾಗೆಯೇ ಯಾರನ್ನೂ ಒಳಗೆ ಬಿಡಲಾರರು. ಹಾಗಾಗಿ ಅವರಿಗೆ ಸಾಮಾಜಿಕ ವ್ಯಕ್ತಿತ್ವ ಎಂಬುದೊಂದು ವಿಸ್ತ್ರತವಾಗಿ ಇರುವುದಿಲ್ಲ. ತೀರಾ ಖಾಸಗಿ ಅಥವಾ ಸೀಮಿತ ಸಂಪರ್ಕದ ವರ್ತುಲದೊಳಗೆ ಇದ್ದುಬಿಡುತ್ತಾರೆ. ಆದರೆ ಇನ್ನು ಕೆಲವರು ವಿಶಿಷ್ಟ ವ್ಯಕ್ತಿಗಳಿರುತ್ತಾರೆ. ಅವರು ಯಾವೊಂದು ಪರಿಧಿಯೊಳಗೂ ಸೀಮಿತರಾಗಿ ಬಿಡುವುದಿಲ್ಲ. ಬದಲಾಗಿ ಅನೇಕರ ಪರಿಧಿಗಳೊಳಗೆ ಸಲೀಸಾಗಿ ಪ್ರವೇಶಿಸುತ್ತಾರೆ ಹಾಗೂ ಹೊರಗೆ ಬರುತ್ತಾರೆ. ಆದರೆ ಎಲ್ಲಿಯೂ ಅವರ ಪ್ರವೇಶ ವ್ಯರ್ಥವಾಗುವುದಿಲ್ಲ. ಅಲ್ಲಿ ಒಂದು ಪ್ರಭಾವ ಬೀರುತ್ತಾರೆ. ಏನಾದರೂ ಕೊಡುತ್ತಾರೆ, ಯಾರಿಂದಾದರೂ ಇನ್ಯಾರಿಗಾದರೂ ಬರಬೇಕಾದ್ದೇನಾದರೂ ಇದ್ದರೆ ಬರಿಸಿಕೊಡುತ್ತಾರೆ, ಉಪಯುಕ್ತವಾದ ಸಲಹೆಗಳನ್ನು ಕೊಡುತ್ತಾರೆ, ಪ್ರಗತಿಗೆ ಮಾರ್ಗದರ್ಶನ ಕೊಡುತ್ತಾರೆ, ಆರ್ಥಿಕ