ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅತಿಥಿಗಳನ್ನು ಮಾತಾಡಿಸಿ ಆದರಿಸುವಲ್ಲಿವರೆಗೂ ಸೈ. ಅವರ ದೃಷ್ಟಿಯಲ್ಲಿ ಸಾರ್ವಜನಿಕ ಕೆಲಸದಲ್ಲಿ ತೊಡಗಿಕೊಳ್ಳಲು ನಾಯಕತ್ವವೇ ಬೇಕೆಂದೇನಿಲ್ಲ. ಹಾಗೆಯೇ ಸೂಚನೆಗಳಿಗೂ ಕಾಯಬೇಕಿಲ್ಲ. ಎಲ್ಲಿ ಯಾವ ಕೆಲಸ ಇದೆಯೆಂದು ಕಾಣಿಸುತ್ತದೆಯೋ ಅದನ್ನು ಮಾಡುವ ಉತ್ಸಾಹವಿದ್ದರೆ ಸಾಕು. ಹಾಗಾಗಿ ಸಾಮಾಜಿಕ ವ್ಯಕ್ತಿತ್ವದ ಒರತೆ ಅವರ ಹೃದಯ ಮತ್ತು ಮನಸ್ಸುಗಳಲ್ಲೇ ಇತ್ತು. ಈ ಕಾರಣಕ್ಕಾಗಿಯೇ ಶಾಲೆ ಕಾಲೇಜುಗಳಲ್ಲಿ ಅವರು ಸ್ವಯಂಸೇವಕರಾಗಿ ಮುಂಚೂಣಿಯಲ್ಲಿದ್ದರು. ಅಂತೆಯೇ ಈ ಸ್ವಯಂಸೇವಾ ಪ್ರವೃತ್ತಿ ತನ್ನ ನೆಂಟರಿಷ್ಟರ ಮನೆಗಳಲ್ಲಿ, ದೇವಾಲಯಗಳಲ್ಲಿ, ಧಾರ್ಮಿಕ ಸಮಾರಂಭಗಳಲ್ಲಿ ಗುಡಿಸುವುದು, ಬಡಿಸುವುದು, ಸಭೆಗಳನ್ನೇರ್ಪಡಿಸುವುದು ಇತ್ಯಾದಿ ಕೆಲಸಗಳಿಗೆ ವಿಸ್ತರಿಸಿತ್ತು. ಇದು ಕೇವಲ ಬಾಲ್ಯ ಮತ್ತು ಯೌವನದ ಸಂಗತಿಯಲ್ಲ. ಈಗಲೂ ಜೋಶಿಯವರಲ್ಲಿ ಅಂದಿನ ಲವಲವಿಕೆ ಇದೆ. ತಾನು ತೊಡಗುವುದಷ್ಟೇ ಅಲ್ಲದೆ ಇನ್ನೊಬ್ಬರನ್ನೂ ಕೆಲಸದಲ್ಲಿ ತೊಡಗಿಸಿಕೊಂಡು ಒಂದು ಸಾರ್ವಜನಿಕ ಕೆಲಸ ಸುಸೂತ್ರವಾಗಿ ಆಗುವಂತೆ ಮಾಡುವಲ್ಲಿ ಜೋಶಿಯವರಿಗಿರುವ ಕಳಕಳಿ ಸಾಮಾಜಿಕವಾದುದು.

ಕಾಲೇಜು ಶಿಕ್ಷಕ ವೃತ್ತಿ ದೊರಕಿದ್ದು ಜೋಶಿಯವರಿಗೆ ದೊಡ್ಡ ಲಾಭವಾಯಿತು. ಎಂ.ಕಾಂ. ಕಲಿತ ಇವರು ಸರಕಾರಿ ಅಕೌಂಟ್ಸ್ ಅಧಿಕಾರಿಯಾಗುತ್ತಿದ್ದರೆ ಇಂದಿನ ಈ ಬಗೆಯ ಬೆಳವಣಿಗೆ ಸಾಧ್ಯವಿರಲಿಲ್ಲ. ಉಪನ್ಯಾಸಕ ವೃತ್ತಿಯಿಂದಾಗಿ ಅವರಿಗೆ ಬುದ್ಧಿಮತ್ತೆಯ ಬಿತ್ತುವಿಕೆಗೆ ಸಾಕಷ್ಟು ಕ್ಷೇತ್ರಗಳೂ ಸಮಯಾವಕಾಶವೂ ಸಿಕ್ಕಿತು. ಅವರು ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಲ್ಲಿ ಪಾಠ ಮಾಡುತ್ತಿದ್ದರೆ ತರಗತಿಗಳಿಂದ ಹೊರಗೆ ಅವರು ಬಯಲಲ್ಲಿ ನಿಂತಲ್ಲಿ, ಹೋಟೆಲಲ್ಲಿ ಕುಳಿತಲ್ಲಿ ಸುತ್ತಲಿದ್ದವರಿಗೆ ಮಾಹಿತಿಗಳ ಪ್ರವಾಹ ಹರಿಯುತ್ತಿತ್ತು. ಅಂದರೆ ಅವರು ಕಾಲೇಜಿನ ತರಗತಿಗಳಿಂದ ಹೊರಗೆ ವ್ಯಾಪಿಸಿದ ಶಿಕ್ಷಕರಾಗಿದ್ದಾರೆ. ಇನ್ನು ಯಕ್ಷಗಾನ ಅವರ ಆಸಕ್ತಿಯ ಕ್ಷೇತ್ರವಾಗಿದ್ದುದರಿಂದ ಅವರ ಜನ ಸಂಪರ್ಕದ ವಲಯ ಪಂಡಿತರಿಂದ ಪಾಮರರವರೆಗೂ ವಿಸ್ತರಿಸಿತು. ತನ್ನಲ್ಲಿಲ್ಲದ ಸಾಮರ್ಥ್ಯವನ್ನು ಆರೋಪಿಸಿಕೊಳ್ಳುವ ಯುವಕರ ಕೆಲಸ ಹಾಗೂ ಪ್ರತಿಭೆಗಳನ್ನು ಗುರುತಿಸಿ ಪ್ರಶಂಸಿಸಿ ಸರಿಯಾದ ದಾರಿಯಲ್ಲಿ ವಿಕಸನಗೊಳ್ಳಲು ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಎಲ್ಲ ಸ್ತರದ ಶಿಕ್ಷಕರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ ಜೋಶಿಯವರು ವಿವಿಧ ಶಿಬಿರಗಳು, ಕಾರ್ಯಾಗಾರಗಳು ಹಾಗೂ ವಿಚಾರಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಇಲ್ಲಿ ತನ್ನ ಕಲಾ ಸಿದ್ದಾಂತ ಹಾಗೂ ನಿಲುಮೆಗಳನ್ನು ಬಿಡದೆ ಸಮನ್ವಯ ಮತ್ತು ಸ್ವೀಕಾರ ದೃಷ್ಟಿಗಳಿಂದ ಚರ್ಚೆಗಳನ್ನು ಅರ್ಥಪೂರ್ಣಗೊಳಿಸಿದ್ದಾರೆ. ತಾಳಮದ್ದಳೆಗಳ ಸಂಘಟಕರ ಸಂಕಷ್ಟದ ಸ್ಪಷ್ಟ ಅರಿವು ಇರುವ ಜೋಶಿಯವರು ಸಮಸ್ಯೆಗಳಾದಾಗ ಹಿರಿಯ-ಕಿರಿಯ ಅರ್ಥಧಾರಿಗಳಿಗೆ ದೊಡ್ಡ ಪಾತ್ರಗಳನ್ನು ನೀಡಿ ತಾನು ಸಣ್ಣ ಪಾತ್ರಗಳನ್ನೂ ನಿರ್ವಹಿಸಿದ್ದೂ ಇದೆ. ಕಡಿಮೆ ಅರ್ಥ ಹೇಳಿ ಸಮಯಕ್ಕೆ ಸರಿಯಾಗಿ ತಾಳಮದ್ದಳೆ ಮುಗಿಯುವುದಕ್ಕೆ ನೆರವಾದದ್ದೂ ಇದೆ. ಅವರ ಈ ಸಹಕಾರವನ್ನು

ವಾಗರ್ಥ ಗೌರವ / 16