ಜೋಶಿ ಅರ್ಥಗಾರಿಕೆ
ಐತಿಹಾಸಿಕ ಆಯಾಮಗಳು
ರಾಧಾಕೃಷ್ಣ ಕಲ್ಟಾರ್
ತಾಳಮದ್ದಲೆ ಅರ್ಥಧಾರಿಯಾಗಿ ಪ್ರಭಾಕರ ಜೋಶಿಯವರದು ಐದು ದಶಕಗಳ ಅನುಭವ. ಆದುದರಿಂದ ಅವರ ಅರ್ಥಗಾರಿಕೆಯ ವಿಶ್ಲೇಷಣೆ ಅಂದರೆ ಅದು ತಾಳಮದ್ದಲೆಯ ಇತಿಹಾಸದ ವಿಶ್ಲೇಷಣೆಯೂ ಹೌದು. ಅಥವಾ ತಾಳಮದ್ದಲೆಯ ಈ ದಶಕಗಳ ಇತಿಹಾಸದ ಅವಲೋಕನ ಜೋಶಿಯವರ ಅರ್ಥಗಾರಿಕೆಯ ಹೊರತು ಅಪೂರ್ಣವೇ ಆಗಿಬಿಡುತ್ತದೆ. ಎಳೆಯ ವಯಸ್ಸಿನಲ್ಲೇ ಅರ್ಥಗಾರಿಕೆಗೆ ತೊಡಗಿದ ಜೋಶಿಯವರ ಅರ್ಥದಲ್ಲಿ ಗುರುತಿಸಬಹುದಾದ ವಿಶಿಷ್ಟಾಂಶಗಳು ಮತ್ತು ಅವುಗಳು ಮುಖೇನ ಶೈಲಿಯೊಂದನ್ನು ರೂಪಿಸಿಕೊಳ್ಳುವಲ್ಲಿ ಅವರಿಗಿದ್ದ ಐತಿಹಾಸಿಕ ಅಗತ್ಯಗಳನ್ನು ಗುರುತಿಸುವುದು ಸದ್ಯ ನನ್ನ ಉದ್ದೇಶ.
ಏನು ಜೋಶಿಯವರ ಅರ್ಥದ ವಿಶಿಷ್ಟತೆಗಳು?
1. ಸಂಕ್ಷಿಪ್ತತೆ. ಕೆಲವೇ ವಾಕ್ಯಗಳಲ್ಲಿ ಪದ್ಯದ ಸಾರವನ್ನು ಹಿಡಿದಿಡಬಲ್ಲ ಸಾಮರ್ಥ್ಯ. ಅವರ ಅರ್ಥಗಾರಿಕೆ ದೀರ್ಘವಲ್ಲ.
2. ವಿನೋದ ಪ್ರಿಯತೆ, ನವಿರಾದ ಹಾಸ್ಯ ಅವರ ಅರ್ಥಗಾರಿಕೆಯ ಒಂದು ಪ್ರಧಾನ ಲಕ್ಷಣ. ಕೆಲವೊಮ್ಮೆ ಗಂಭೀರವಾಗಿರಬೇಕಾದಲ್ಲೂ ಹಾಸ್ಯ ಇಣುಕುವುದುಂಟು.
3. ಸರಳ ಭಾಷೆ, ಎಂತಹ ಜಟಿಲ, ತಾತ್ವಿಕ ವಿಷಯವಾದರೂ ಅವರ ಭಾಷೆ