ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವರ ಜೊತೆಯಲ್ಲಿ ಅರ್ಥ ಹೇಳಿದ್ದೇನೆ ಎಂಬುದನ್ನು ಬಿಟ್ಟರೆ ಅವರ ಸಮದಂಡಿಯಲ್ಲ. ಅದು ನನ್ನ ಅಳವಿಗೆ ಮೀರಿದ್ದು. ಎಳೆಯ ವಯಸ್ಸಿನಲ್ಲಿಯೇ ಶೇಣಿ, ಸಾಮಗರಂಥ ಘಟಾನುಘಟಿಗಳೊಂದಿಗೆ ಗುರುತಿಸಲ್ಪಟ್ಟವರು ಅವರು. ಅವರೊಡನಿದ್ದೂ ಅವರಂತಾಗದೆ ತನ್ನದೇ ದಾರಿಯನ್ನು ಕಂಡುಕೊಂಡ ಧೀಮಂತ, ಅವರ ಬಲದೌರ್ಬಲ್ಯಗಳನ್ನು ವಿಶಿಷ್ಟ ವಿಚಿಕಿತ್ಸಕ ಬುದ್ಧಿಯಿಂದ ಅಳೆದು ತಿಳಿಯಬಲ್ಲ ಮೇಧಾವಿ. ಪ್ರಸಿದ್ಧ ಅರ್ಥದಾರಿ ಗಳಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತ ಸಮಕಾಲೀನ ಪ್ರಪಂಚದ ಸವಾಲುಗಳ ಪರಿಚಯವೇ ಇಲ್ಲದವರಾಗಲಿಲ್ಲ. ಪುರಾಣದ ಆಖ್ಯಾನಗಳಿಗೆ ಸಮಕಾಲೀನರಿಗೆ ಸಮ್ಮತವಾಗುವ ರೀತಿಯಲ್ಲಿ ವ್ಯಾಖ್ಯಾನ ಮಾಡುವ ಕೌಶಲವನ್ನು ರೂಢಿಸಿಕೊಂಡರು. ಅದು ಅವರ ಅರ್ಥಗಾರಿಕೆಗೆ ಹೊಸ ಆಯಾಮವನ್ನೊದಗಿತು. ಅವರ ವ್ಯಾಖ್ಯಾನವನ್ನು ಆಲಿಸಲು ಶೋತೃಗಳು ಕುತೂಹಲದಿಂದ ಕಾದಿರುವಂತೆ ಮಾಡಿದರು. ಕೆಲವೇ ಸಮಯದಲ್ಲಿ ಶ್ರೇಷ್ಠ ಅರ್ಥಧಾರಿಗಳ ವರ್ಗಕ್ಕೆ ಸೇರಿದರು.

ಅರ್ಥಗಾರಿಕೆಗೆ ಅವರ ಪ್ರತಿಭೆ ಸೀಮಿತವಾಗಲಿಲ್ಲ. ಯಕ್ಷಗಾನದ ಸ್ವರೂಪದ ಬಗೆಗೆ ತುಂಬ ಗಾಢವಾಗಿ ಚಿಂತಿಸಿದವರ ಮಧ್ಯೆ ಜೋಶಿ ಪ್ರಮುಖವಾಗಿ ಕಾಣಿಸಿಕೊಳ್ಳು ತ್ತಾರೆ. ಡಾ. ಶಿವರಾಮ ಕಾರಂತರ ನಂತರ ಯಕ್ಷಗಾನದ ಚಿಂತಕರಲ್ಲಿ ಜೋಶಿ ಅಗ್ರಸ್ಥಾನದಲ್ಲಿದ್ದಾರೆ. ಕಲೆಯ ಅಂಗೋಪಾಂಗಗಳನ್ನು ಕುರಿತು ಅವರು ಹಲವಾರು ಪ್ರಬಂಧಗಳನ್ನು ಮಂಡಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಅವರ ಯಕ್ಷಗಾನ ಪದಕೋಶವಂತೂ ಕಲೆಯ ಕುರಿತು ಅಧ್ಯಯನದಲ್ಲಿ ತೊಡಗಿರುವವರಿಗೆಲ್ಲ ಅನಿವಾರ್ಯವಾದ ಆಕರಗ್ರಂಥವಾಗಿದೆ.

ಜೋಶಿಯವರದು ವ್ಯಾಪಕವಾದ ಓದು. ಅಂತೆಯೇ ಅವರಿಗೆ ಸಮಕಾಲೀನ ವಿಚಾರಧಾರೆಗಳ ಪರಿಚಯವಿದೆ. ವರ್ತಮಾನಕಾಲದ ವಿದ್ಯಮಾನಗಳನ್ನು ಚೆನ್ನಾಗಿ ವಿಶ್ಲೇಷಿಸಬಲ್ಲವರು. ಜೊತೆಗೆ ಬಹುತೇಕವಾಗಿ ಭಾರತದ ರಂಗಭೂಮಿಯ ಅಧ್ಯಯನವಿದೆ. ಕಥಕ್ಕಳಿ, ತೆರಕ್ಕೂತು, ಭರತನಾಟ್ಯ, ಆಂಧ್ರದ ಯಕ್ಷಗಾನ, ಮಣಿಪುರಿ, ಒಡಿಸ್ಸಿ ಇತ್ಯಾದಿ ಕಲೆಗಳ ಕುರಿತು ಚೆನ್ನಾಗಿ ತಿಳಿದಿದ್ದಾರೆ. ಅವರೆಂದರೆ ಮಿನಿ ವಿಶ್ವಕೋಶವಿದ್ದಂತೆ. ಹಾಗಾಗಿ ಅವರೊಂದಿಗೆ ಯಾವ ವಿಷಯವನ್ನು ಕುರಿತಾದರೂ ಮಾತನಾಡಬಹುದು. ಹಾಗಾಗಿ ಅವರ ಒಡನಾಟವೆಂದರೆ ಜ್ಞಾನಕೋಶದೊಂದಿಗೆ ಸಂಚಾರವೆನಿಸುತ್ತದೆ.

ವಿಶ್ವಕೋಶ, ಜ್ಞಾನಕೋಶಗಳ ಜೊತೆಗೆ ಬಹಳಕಾಲವನ್ನು ಕಳೆಯಲಾಗಲಿಕ್ಕಿಲ್ಲ. ಯಾಕೆಂದರೆ ಅಲ್ಲಿ ಗಾಂಭೀರ್ಯ ಹೆಚ್ಚು. ಬೇಸರವಾಗುವ ಸಾಧ್ಯತೆಯಿದೆ. ಆದರೆ ಜೋಶಿಯವರ ಜೊತೆಯಲ್ಲಿದ್ದರೆ ಅದಕ್ಕೆ ಅವಕಾಶವಿಲ್ಲ. ಧಾರಾಳವಾಗಿ ಹಾಸ್ಯದೌತಣ ವಿರುತ್ತದೆ. ಅಭಿನಯವೂ ಸೇರಿ ಮತ್ತಷ್ಟು ರಂಜಕವಾಗುತ್ತದೆ. ಕುತೂಹಲವನ್ನು ಹುಟ್ಟಿಸುವ ಮಾತುಕತೆಗಳ ಜೊತೆಗೆ ಅವರ ಅದಮ್ಯ ಕುತೂಹಲವನ್ನೂ ಕಾಣಬಹುದು.

ಜೋಶಿಯವರು ಸಹೃದಯರು. ಗುಣವನ್ನು ಗೌರವಿಸುವುದು ಹುಟ್ಟುಗುಣ. ಎಳೆಯರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದು. ಅಂತೆಯೆ ತಾಳಮದ್ದಳೆಗಳಲ್ಲಿ

ವಾಗರ್ಥ ಗೌರವ / 27