ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದು ಪರಿಷ್ಕೃತ ಆವೃತ್ತಿ.

ಅನಂತರ ಅಕ್ಷರಚಿಂತನಮಾಲೆಯ ಸಲುವಾಗಿ ಕುಮಾರಿಲ ಭಟ್ಟರ ಮೇಲೆ ಕೃತಿಯೊಂದನ್ನು ರಚಿಸುವ ಪ್ರಸ್ತಾಪ ಬಂತು. ಅದು ಬಂದದ್ದು ಜೋಶಿಯವರಲ್ಲಿ.

ಅವರು ನನ್ನನ್ನು ಸಂಪರ್ಕಿಸಿದರು. ಇಬ್ಬರೂ ಸೇರಿ ಆ ಗ್ರಂಥವನ್ನು ರಚಿಸಿದೆವು. ಮೂಲಗ್ರಂಥದ ಒಂದು ಅಧ್ಯಾಯದ ಅನುವಾದ, ಟಿಪ್ಪಣಿ, ಪೀಠಿಕೆ ಮತ್ತು ಸೂಕ್ತಿಗಳನ್ನು ಒಳಗೊಂಡ ಪುಸ್ತಕ ಅದು. ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾದ ಕೀರ್ತಿನಾಥ ಕುರ್ತಕೋಟಿಯವರ ಹಿನ್ನುಡಿಯಿಂದ ಅಲಂಕೃತವಾದ ಪುಸ್ತಕ ಅದು. ನನಗೆ ಆತ್ಮವಿಶ್ವಾಸ ವನ್ನು ತಂದಿತು. ನಾನೂ ಬರೆಯಬಲ್ಲೆನೆನಿಸಿತು. ಅನಂತರ ಅನೇಕ ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದೆ. ಸ್ವತಂತ್ರ ಕೃತಿಗಳನ್ನು ರಚಿಸಿದೆ. ಅವು ಸಾಕಷ್ಟು ಮನ್ನಣೆಯನ್ನೂ ಗಳಿಸಿವೆ. ಜೋಶಿಯವರು ನನ್ನನ್ನು ಬರವಣಿಗೆಗೆ ಎಳೆಯದಿದ್ದಿದ್ದರೆ ಬಹುಶಃ ನಾನು ಈ ಕ್ಷೇತ್ರಕ್ಕಿಳಿಯುತ್ತಿರಲಿಲ್ಲ. ನನ್ನಲ್ಲಿರುವ ಶಕ್ತಿಯು ಲೋಕಕ್ಕೆ ತಿಳಿಯುತ್ತಿರಲಿಲ್ಲ. ಆಂಜನೇಯನಂತೆ ಮುದುಡಿ ಕೂಡುತ್ತಿದ್ದೆನೆನಿಸುತ್ತದೆ. ಅದನ್ನು ನೆನೆದಾಗಲೆಲ್ಲ ಜೋಶಿಯವರ ಬಗೆಗೆ ಕೃತಜ್ಞತಾಭಾವ ಮೂಡುತ್ತದೆ. ನನ್ನಂತೆ ಇನ್ನನೇಕರಿಗೆ ಅವರವರ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದವರು ಜೋಶಿ. ಅದು ಅವರ ದೊಡ್ಡಗುಣ.

ಅವರ ಸಾಧನೆ ದೊಡ್ಡದು. ಕ್ಷಣಕಾಲವೂ ಸುಮ್ಮನೆ ಕುಳಿತಿರದೆ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುವುದು ಅವರ ಸ್ವಭಾವ. ತಮಗೆ ಮಾಡಿದ ಸಣ್ಣ ಉಪಕಾರವನ್ನೂ ಮರೆಯುವವವರು ಅವರಲ್ಲ. ಸಂಬಂಧಗಳನ್ನು ಕಾಯ್ದುಕೊಳ್ಳುವುದನ್ನು ಅವರಿಂದ ಕಲಿಯಬೇಕು. ಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸಿದರೆ ಊರಿಗೆ ಹೋದ ಕೂಡಲೆ ಕಾರ್ಡ್ ಬರೆದು ಕೃತಜ್ಞತೆ ಸೂಚಿಸುವ ಅವರ ಸ್ವಭಾವ ಅಚ್ಚರಿ ಹುಟ್ಟಿಸುತ್ತದೆ. ಪತ್ರ ಬರೆಯುವುದಕ್ಕೆ ಸ್ವಲ್ಪವೂ ಬೇಸರವಿಲ್ಲ. ಅಂತೆಯೇ ಲೇಖನವನ್ನು ಕೇಳಿದರೆ ಒಂದೆರಡು ತಾಸುಗಳಲ್ಲಿ ಸಿದ್ಧ. ಅವರ ಬರವಣಿಗೆಯ ವೇಗಕ್ಕೆ ಬೆರಗಾಗಿದ್ದೇನೆ. ಅಷ್ಟೇ ಹದ. ಎಷ್ಟು ಬೇಕೊ ಅಷ್ಟು ಆಕರ್ಷಕ ಬರವಣಿಗೆ, ಅವರ ಬರಹವನ್ನು ಓದಲು ಅಭ್ಯಾಸಬೇಕು ಅಷ್ಟೇ.

ಜೋಶಿಯವರ ಸಾಧನೆಯನ್ನು ಗುರುತಿಸಿ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯು ಪಾರ್ತಿಸುಬ್ಬ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಅದಕ್ಕೆ ಅತ್ಯಂತ ಅರ್ಹವ್ಯಕ್ತಿ ಅವರು. ಅವರಿಗೆ ಇನ್ನಿತರ ಅನೇಕ ಪ್ರಶಸ್ತಿಗಳೂ ಸಮ್ಮಾನಗಳೂ ನಡೆದಿವೆ. ಅದು ಜನಾದರಣೆಯ ಪ್ರತೀಕ, ಮೈಸೂರಿನಲ್ಲಿ ಅವರನ್ನು ಗೌರವಿಸಿದ್ದು ಹಿರಿಮೆಗೆ ಸಾಕ್ಷಿ. ಅವರ ಜನಪ್ರಿಯತೆಗೆ ಪ್ರದೇಶದ ಹಂಗಿಲ್ಲ. ಯಕ್ಷಗಾನ ಪ್ರಪಂಚಕ್ಕೆ ಅವರೊಂದು ಅಮೂಲ್ಯ ಆಸ್ತಿ. ಅವರಿಗೆ ಆಯುಸ್ಸು ಆರೋಗ್ಯಗಳು ಚಿರಕಾಲ ಇರಲೆಂದು ಹಾರೈಕೆ.

◆ ◆ ◆

ವಾಗರ್ಥ ಗೌರವ / 29