ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೃತಜ್ಞತಾಗ್ರಂಥವಾದೀತು!

ಜೋಶಿಯವರು ಅರ್ಥಗಾರಿಕೆಯಲ್ಲಿ ಮೂರು ತಲೆಮಾರುಗಳ ಕೊಂಡಿಯಾಗಿದ್ದಾರೆ. ಶೇಣಿಯವರ ಸಮಗ್ರತೆ, ಸಾಮಗರ ಶೈಲಿ, ತೆಕ್ಕಟ್ಟೆಯವರ ಜ್ಞಾನ, ಪದರೀತಿ, ದೇರಾಜೆಯವರ ಮೊನಚು, ಪೆರ್ಲ ಪಂಡಿತರ ಗಂಭಿರ ವಿಧಾನ, ಮಾರೂರು ಭಂಡಾರಿಯವರ ನಿರ್ವಹಣಾ ಕ್ರಮ, ರಾಮದಾಸ ಸಾಮಗರ ಭಾವುಕತೆಗಳೆಲ್ಲಾ ಇವರಲ್ಲಿ ಮುಪ್ಪುರಿಗೊಂಡಿವೆ. ಆ ಹಿರಿಯ ತಲೆಮಾರಿನಿಂದ ನಮ್ಮ ತಲೆಮಾರಿನ ವರೆಗೆ ಎಲ್ಲರೊಂದಿಗೆ ಎರಕವಾಗಿ ಅರ್ಥ ಹೇಳುವ ಅವರ ಪರಿ ಅನ್ಯಾದೃಶವಾದುದು. ಎಲ್ಲಾ ಕಲಾವಿದರ ಮರ್ಮ, ವೈಶಿಷ್ಟ್ಯವರಿತ ಜೋಶಿ ಒಬ್ಬ ಪರಿಪಕ್ವ ಕಲಾವಿದರೆನಿಸಿಕೊಂಡಿದ್ದಾರೆ.

ಜೋಶಿ ಸದಾ ವಿನೋದಶೀಲ, ಸಹಜಸ್ಪಂದನ ಅವರ ಉಸಿರು. ಯಾರ ಮನೆಗೇ ಹೋಗಲಿ ಆ ಮನೆಯವರಿಗೆಲ್ಲಾ ಅವರು ಆಪ್ತರಾಗಿಬಿಡುತ್ತಾರೆ. ಅದಕ್ಕೆ ಕಾರಣ ಅವರ ವಿನೋದಶೀಲ ಪ್ರವೃತ್ತಿ ಮತ್ತು ಎಳೆಯ ಮಗುವಿನಂತಹ ನಿರ್ಮಲ ಮನಸ್ಸು. ಅಲ್ಲಿ ಅವರು ಯಾವುದೇ ಹಮ್ಮು - ಬಿಮ್ಮುಗಳಿಗೆ ಒಳಗಾಗುವುದಿಲ್ಲ. ಅದೇ ಅವರ ಜನಪ್ರಿಯತೆಯ ಗುಟ್ಟು.

ಜೋಶಿ ಅರ್ಥಗಾರಿಕೆಯಲ್ಲಿ ಅಕಾಡೆಮಿಕ್ ಚಿಂತನೆ, ಪಾತ್ರಚಿತ್ರಣ, ನಿರ್ವಹಣೆ, ಭಾವ, ತರ್ಕ- ಎಲ್ಲಾ ಇವೆ. ಅದು ವಿಮರ್ಶೆ, ಚಿತ್ರ, ಚಿತ್ರಣ ಎಲ್ಲವೂ ಆಗಬಲ್ಲುದು. ಜೋಶಿ ಅವರಿಗೆ ಯಕ್ಷಗಾನದ ಎಲ್ಲಾ ಪ್ರದೇಶಗಳ ಆಳವಾದ ಪರಿಚಯವಿದೆ. ಅವರಿಗೆ ತೆಂಕು, ಬಡಗು, ಉತ್ತರ ಕನ್ನಡ ಎಂಬ ಭೇದಭಾವ ಇಲ್ಲ. ಅವೆಲ್ಲವೂ ಸೇರಿ ಯಕ್ಷಗಾನ ಒಂದು ಕಲಾ ಕುಟುಂಬವೆಂದು ಭಾವಿಸುತ್ತಾರೆ. ಒಟ್ಟಿನಲ್ಲಿ ಅವರೊಬ್ಬ ಸಮಗ್ರ ಕಲಾಚಿಂತಕರು.

ಸದಾ ವಿನೋದಶೀಲರಾಗಿದ್ದು, ಹಿರಿಯ ಕಿರಿಯರೊಳಗಿನ ಅಂತರವನ್ನು ಇಲ್ಲವಾಗಿಸುವ ಜೋಶಣ್ಣ ಸಾಂಸ್ಕೃತಿಕ ಕಾರ್ಯಗಳಲ್ಲೂ, ರಂಗದಮೇಲೂ ಎಲ್ಲರನ್ನೂ ಒಳಗೊಳಿಸುವ, Involve ಮಾಡುವ ಪ್ರೇರಕ ಶಕ್ತಿಯಾಗಿದ್ದಾರೆ, ವಿಸ್ತಾರವಾದ ಓದು, ಅಧ್ಯಯನಗಳ ಪರಿಪಾಕ ಅವರು. ಬಹುಶ್ರುತ್ವ, ಸರ್ವಸಮತೆ ಮತ್ತು ಗೆಳೆತನಗಳ ವಿಶಿಷ್ಟ ಮಿಶ್ರಣ ಅವರು. ಯಕ್ಷಗಾನದ ಬಗೆಗಿನ ಅವರ ಬರಹಗಳ ವ್ಯಾಪ್ತಿ, ವಿಸ್ತಾರ, ವಸ್ತು, ವಿಷಯ ನಿಜಕ್ಕೂ ವಿಸ್ಮಯಾವಹವಾದುದು. ಅವರ ಕುಟುಂಬ ವಾತ್ಯಲ್ಯ ಬಂಧುಪ್ರೇಮ, ಗೆಳೆಯರ ಬಗೆಗಿನ ಕಾಳಜಿ ಇವೆಲ್ಲದರ ಬಗ್ಗೆ ನಾವು ನಿತ್ಯ ಕೇಳುತ್ತಾ ನೋಡುತ್ತಾ ಇರುತ್ತೇವೆ.

(ಸಂಗ್ರಹ)

◆ ◆ ◆

ವಾಗರ್ಥ ಗೌರವ / 31