ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹುಟ್ಟಿದವರು. ಅರ್ಥಗಾರಿಕೆಯನ್ನು ಅಭ್ಯಸಿಸುವಲ್ಲಿ ನಮಗೆ ದೊರೆತ ಗರಡಿಗಳು ಸಮಾನ. ಕಾರ್ಕಳ ಶ್ರೀವೆಂಕಟರಮಣ ಯಕ್ಷಗಾನ ಕಲಾ ಸಮಿತಿ ಮತ್ತು ಶ್ರೀ ಅನಂತಶಯನ ದೇಗುಲದ ಪೌಳಿಯಲ್ಲಿ ಯಕ್ಷಗಾನ ತಾಳಮದ್ದಳೆ ಸಂಘ. ಅಲ್ಲಿಂದ ಹೊರಟ ನಮ್ಮ ಅಭಿಯಾನ ನಮ್ಮನ್ನು ಭಿನ್ನ ನೆಲೆಗಳಿಗೆ ತಲುಪಿಸಿರುವುದು ಸತ್ಯ. ಸುಮಾರು ಅರುವತ್ತು ವರ್ಷಗಳ ಸಹಚಿಂತನ, ಸಹಯಾತ್ರೆ ನಮ್ಮೊಳಗಾಗಿವೆ. ಅವರ ಇವತ್ತಿನ ನೆಲೆ ಯಾವ ಬಗೆಯದೆನ್ನುವುದು ಅವರ ವ್ಯಕ್ತಿತ್ವದ ವಿವಿಧ ಮುಖಗಳ ಮತ್ತು ಸಾಧನೆಯ ವಿವಿಧ ಮಜಲುಗಳ ವಿಶ್ಲೇಷಣೆ, ಮೌಲ್ಯಮಾಪನ ನಡೆಸಿದ ಕಳೆದೆರಡು ದಿನಗಳ ವಿಚಾರಗೋಷ್ಠಿ ಗಳಲ್ಲಿ ವ್ಯಕ್ತವಾಗಿವೆ. ಬಹುಶಃ ಈ ವರೆಗೆ ಸಾಧನೆಯ ವಿಶ್ಲೇಷಣೆ ಈ ಬಗೆಯಲ್ಲಿ ನಡೆದು ಮನ್ನಿಸಿದ ಯಕ್ಷಗಾನ ಕಲಾಕಾರನ ಸನ್ಮಾನವನ್ನು ನಾನು ಕಂಡಿಲ್ಲ.
ಅವರ ಅಭಿಯಾನದ ಒಂದು ದೊಡ್ಡ ಪ್ರಾಪ್ತಿಯೆಂದರೆ ನಾವು ಆರಾಧಿಸಿದ ಅರ್ಥದಾರಿಗಳಾದ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು, ಹರಿದಾಸರಾದ ಮಲ್ಪೆ ಶಂಕರನಾರಾಯಣ ಸಾಮಗರು, ಮಲ್ಪೆ ಹರಿದಾಸ ರಾಮದಾಸ ಸಾಮಗರು, ಪಂಡಿತ ಪೆರ್ಲ ಕೃಷ್ಣ ಭಟ್ಟರು ಇಂತವರು ಬಯಸಿದ ಇದಿರು ಅರ್ಥಧಾರಿಯಾಗಿ ಹೋರಾಟಕ್ಕೆ ನಿಂತುದು. 'ಕಾಳಗ' ಪ್ರಸಂಗಗಳ ಅರ್ಥಗಾರಿಕೆ ಎಂದರೆ ವಿದ್ವತ್ತೆಯ ಒಂದು ಹೋರಾಟವೇ ತಾನೆ. ಇದರಲ್ಲಿ ಅವರಿಗೆ ಧನ್ಯತೆ ಇದೆ.
ಯಕ್ಷಗಾನಕ್ಕೆ ಜೋಶಿಯವರ ಕೊಡುಗೆ ಏನು ಎಂದು ಕೇಳಿದರೆ ಈ ರಂಗಕ್ಕೆ ಅರ್ಥಶಾಸ್ತ್ರ, ತತ್ವಶಾಸ್ತ್ರ ಸಹಿತ ಜ್ಞಾನದ ಹಲವು ಶಾಖೆಗಳ ಪರಿಜ್ಞಾನವನ್ನು ಆವರಣ ಭಂಗವಿಲ್ಲದೆ ನೀಡಿದ ಸಾಧನೆ ಎನ್ನಬಹುದು. ಅದು ಶೈಕ್ಷಣಿಕವಾಗಿ ಅವಲಂಬನೀಯ ಜ್ಞಾನದಾನ. ಬರಿಯ ಗಾಳಿಮಾತಲ್ಲ. ಯಕ್ಷಗಾನಕ್ಕೆ ಪರಿಷ್ಕಾರಯುತ ಭಾಷೆಯನ್ನು ನೀಡಿದವರಾಗಿಯೂ ಅವರನ್ನು ಪರಿಗಣಿಸಬೇಕು. ಎಲ್ಲಕ್ಕಿಂತ ಸದ್ಯ ರಂಗದಲ್ಲಿರುವ ಕಲಾವಿದರಲ್ಲಿ ತಾಂತ್ರಿಕವಾಗಿ ಅತ್ಯಂತ ಪರಿಪೂರ್ಣತೆ ಗಳಿಸಿರುವ ಅರ್ಥಧಾರಿ ಅವರು.
ತಾಂತ್ರಿಕವಾಗಿ ಅಂದರೆ ಏನು? ಪ್ರಸಂಗದ ಆಮೂಲಾಗ್ರ ಮತ್ತು ಕಾವ್ಯಾಲಂಕಾರ ನೆಲೆಯ ತಲಸ್ಪರ್ಶಿ ಅರಿವು, ಆಕರಗಳ ಖಚಿತ ತಿಳಿವಳಿಕೆ, ಪೀಠಿಕೆ, ಪದದ ಎತ್ತುಗಡೆ, ತನ್ನ ಮಂಡನೆ, ಪ್ರತಿವಾದ ಖಂಡನೆ, ಇದಿರಾಳಿಯನ್ನು ಪದದ ಚೌಕಟ್ಟಿಗೆ ಬದ್ಧಗೊಳಿಸು ವುದು, ಮುಂದಿನ ಪದಕ್ಕೆ ತಲುಪಿಸುವುದು, ಪ್ರಸಂಗದ ಯಾವ ಪಾತ್ರವನ್ನಾದರೂ ಸಫಲಗೊಳಿಸುವುದು, ಪ್ರದರ್ಶನವನ್ನು ಹೊತ್ತಿಗೆ ಸರಿಯಾಗಿ ಮುಗಿಸಲು ಬೇಕಾದಂತೆ ಅರ್ಥಧಾರಿಕೆಯನ್ನು ಪ್ರಸ್ವ ಅಥವಾ ದೀರ್ಘಗೊಳಿಸುವ ಛಾತಿ ಇವೆಲ್ಲಾ ತಾಂತ್ರಿಕ ಪರಿಜ್ಞಾನದ ಭಾಗಗಳು. ಇದೆಲ್ಲಾ ಸ್ಥಳೀಯ ತಾಳಮದ್ದಳೆ ಸಂಘಗಳಲ್ಲಿನ ತಾಲೀಮಿನಿಂದ ಒದಗುವಂಥವುಗಳು.

ಯಕ್ಷಗಾನಕ್ಕೆ ಇದುವರೆಗೆ ಒಂದು ವಿಶ್ವವಿದ್ಯಾಲಯವಿಲ್ಲ. ಹೀಗಿರುತ್ತಾ ನಮ್ಮಲ್ಲೇ ಕೆಲವರು ತಾವೇ ಯಾಕೆ ವಿಶ್ವವಿದ್ಯಾಲಯ ಆಗಕೂಡದು ಎಂದು ಹೊರಟರು. ಅವರಲ್ಲಿ ಸಫಲರಾದವರಲ್ಲಿ ಒಬ್ಬರು ಡಾ.ಜೋಶಿ. ಇದನ್ನು ಉದ್ದೇಶಿಸಿಯೇ ಸೇರಾಜೆ ಸೀತಾರಾಮ

ವಾಗರ್ಥ ಗೌರವ / 48