ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಲವನ್ನು ಇಲ್ಲಿ ದಾಖಲಿಸಿದ್ದೇವೆ. ಅವರೂ ಒಂದು ಪ್ರಬಂಧವನ್ನು ಮಂಡಿಸಿ ಜೋಶಿಯವರ ಬರಹದ ವೈಶಿಷ್ಟ್ಯವನ್ನೂ, ಭಾಷಣದ ವೈಖರಿಯನ್ನೂ ದಾಖಲಿಸಿದ್ದಾರೆ.

ಜೋಶಿಯವರ ಅಭಿನಂದನಾ ಸಮಾರಂಭವನ್ನು ಕೇಳಿ, ನೋಡಿ ಆನಂದಿಸಬೇಕೆಂದು ಬೆಂಗಳೂರಿನಿಂದ ಆಗಮಿಸಿದ್ದ ಸೇರಾಜೆ ಸೀತಾರಾಮ ಭಟ್ಟರನ್ನು ನಾವು ವೇದಿಕೆಗೂ ಆಮಂತ್ರಿಸಿ ಜೋಶಿ ಕುರಿತಾಗಿ ಒಂದೆರಡು ಮಾತುಗಳನ್ನು ನಮ್ಮೊಡನೆ ಹಂಚಿಕೊಳ್ಳಬೇಕೆಂದು ಕೇಳಿಕೊಂಡಾಗ ಅವರು ಯಾವ ಸಿದ್ಧತೆಯಿಲ್ಲದಿದ್ದರೂ ಅಷ್ಟೇ ಪ್ರೀತ್ಯಭಿಮಾನದಿಂದ ಜೋಶಿಯವರ ಬಗ್ಗೆ ಮಾತನಾಡುತ್ತಾ ಅವರೊಬ್ಬ'ಎನ್‌ಸೈಕ್ಲೋಪೀಡಿಯಾ', 'ದೈತ್ಯ ಕೆಲಸಗಾರ' ಎಂದು ಅವರ ಕೆಲಸದ ರೀತಿಯನ್ನು ಬಣ್ಣಿಸಿದರು. ಕೆಲವು ಜನ ಹೇಳುವಂತೆ ಜೋಶಿಯವರು ನಾಸ್ತಿಕರೇನೂ ಅಲ್ಲ. ಅವರು ಆಸ್ತಿಕರು ಅನ್ನುವುದರ ಬಗ್ಗೆ ನನ್ನ ಬಳಿ ಉದಾಹರಣೆಗಳಿವೆ ಅನ್ನುತ್ತಾ ಜೋಶಿಯವರ ಬಹುಮುಖ ವ್ಯಕ್ತಿತ್ವವನ್ನು ಕೆಲವೇ ಮಾತುಗಳಲ್ಲಿ ಸೆರೆಹಿಡಿದು ಆ ಕುರಿತು ಲೇಖನವನ್ನೂ ಕೊಟ್ಟಿದ್ದಾರೆ.

ಅಂದಿನ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪ್ರೋǁ ಎಂ.ಎ.ಹೆಗಡೆ, ದಂಟಕಲ್ ಅವರು ಜೋಶಿಯವರಿಗೂ ತನಗೂ ಇರುವ ಸ್ನೇಹದ ನಂಟು ಸುಮಾರು ಐವತ್ತು ವರ್ಷಗಳದ್ದು ಎಂದು ಹೇಳುತ್ತಾ ತಾನು ಬರವಣಿಗೆಯ ವಿಷಯದಲ್ಲಿ ಅವರಿಂದ ಹೇಗೆ ಪ್ರೇರಿತನಾದೆ ಅನ್ನವುದನ್ನು ಕೃತಜ್ಞತಾಭಾವದಲ್ಲಿ ಚಿತ್ರಿಸಿದ್ದಾರೆ. ಇತರರ ಯೋಗ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಜೋಶಿಯವರ ಪಾತ್ರ ಹಿರಿದಾದುದು ಮತ್ತು ಅನುಕರಣೀಯವಾದುದು ಎಂದು ಅವರ ವಿಶಾಲ ಮನೋಭಾವವನ್ನು ಎತ್ತಿಹಿಡಿದಿದ್ದಾರೆ. ಓದು, ಬರಹ ಅಥವಾ ಇನ್ಯಾವುದಾದರೂ ಶೈಕ್ಷಣಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಜೋಶಿಯವರ ಜಾಯಮಾನ ಎಂದು ಮನತುಂಬಿ ಅವರನ್ನು ನೆನೆಸಿಕೊಂಡಿದ್ದಾರೆ.

ಜೋಶಿಯವರ ಕುರಿತು ಅಭಿನಂದನಾ ಭಾಷಣ ಮಾಡಿದ ಉಜಿರೆ ಅಶೋಕ ಭಟ್ಟರು ಯಕ್ಷಗಾನಕ್ಕೊಬ್ಬರೇ ಜೋಶಿ, ಹಾಗಲಕಾಯಿ ಕೊಟ್ಟರೂ ಅದನ್ನು ಒಂದು ರುಚಿಕರವಾದ ಭಕ್ಷ್ಯವಾಗಿ ಮಾಡಿಕೊಡಬಲ್ಲ ಒಬ್ಬ ಪಾಕಪ್ರವೀಣನಿದ್ದರೆ ಅವರು ಜೋಶಿ,ಎಂತಹ ಕಚ್ಚಾ ಸರಕನ್ನೂ ಥಳಥಳಿಸುವ ವಸ್ತುವಾಗಿ ಮಾಡಬಲ್ಲ ಜಾದೂಗಾರನಿದ್ದರೆ ಅವರು ಜೋಶಿ ಎಂದು ಅವರ ವ್ಯಕ್ತಿತ್ವದ ನಾನಾ ಮಗ್ಗುಲುಗಳನ್ನು ಅನಾವರಣಗೊಳಿಸಿದರು. ಪ್ರಭಾಕರ ಜೋಶಿಯವರ Initialಲ್ಲಲ್ಲಿ ಇರುವ 'ಎಂ' ಇದುವರೆಗೆ ಮಾಳ, ಮಂಗಳೂರನ್ನು ಮಾತ್ರ ಹೇಳುತ್ತಿತ್ತು. ಈಗ ಮೈಸೂರನ್ನೂ ಹೇಳುತ್ತದೆ ಎಂದು ಮೈಸೂರು ಜನತೆಯನ್ನು ಖುಷಿಪಡಿಸಿದರು. ಹಿರಿಕಿರಿಯರೆಂಬ ಭೇದವಿಲ್ಲದೆ ಎಲ್ಲರನ್ನೂ Involve ಮಾಡುವ ಜೋಶಿಯವರ ಪರಿ ಚೇತೋಹಾರಿಯದುದು; ಅವರೊಬ್ಬ ಪ್ರೇರಕ ಶಕ್ತಿ; ಅವರು ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಮೂರು ತಲೆಮಾರುಗಳ ಕೊಂಡಿ; ಅವರು ನಮ್ಮೊಡನೆ ಇದ್ದು ನಮ್ಮಂತಹ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದುದು ನಮ್ಮೆಲ್ಲರ ಸೌಭಾಗ್ಯ ಎಂದು ಜೋಶಿಯವರ ವ್ಯಕ್ತಿತ್ವವನ್ನು ಗಗನದೆತ್ತರಕ್ಕೆ ಕಾಣಿಸಿದರು.

viii