ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಶೀಲ ಹಾಗೂ ವರ್ತನೆಯಿಂದ ಮುನಿಯು ಸಂತೋಷಗೊಂಡು ಈ ರೀತಿ ಎಂದನು-

ಸ ತು ವಿಜ್ಞಾಯ ತಂ ಶಾಪ ಮಹರ್ಷೇರ್ಭಾವಿತಾತ್ಮನಃ ॥೨೪॥

“ಎಲೈ ದೇವಿಯೇ, ನಮ್ಮಿಬ್ಬರ ವಂಶವನ್ನು ವೃದ್ಧಿಸಲೋಸುಗ 'ಪೌಲಸ್ತ್ಯ' ಎಂಬ ಹೆಸರಿನಿಂದ ಖ್ಯಾತಿಪಡೆಯುವ, ನಮ್ಮಿಬ್ಬರನ್ನೂ ಹೋಲುವ, ಪುತ್ರನನ್ನು ನಾನು ನಿನಗೆ ಅರ್ಪಿಸುವೆ. ನಾನು ಅಧ್ಯಯನ ಮಾಡುತ್ತಿದ್ದಾಗ ನಿನ್ನಿಂದ ವೇದ ಶ್ರವಣವಾಗಿದೆ; ಆದ್ದರಿಂದ ಆ ಪುತ್ರನು ವಿಶ್ರವಾ ಎಂದು ಖ್ಯಾತಿಗೊಳ್ಳುತ್ತಾನೆ.” ಪುಲಸ್ತ್ಯನು, ತೃಣಬಿಂದುವಿನ ಬಿನ್ನಹವನ್ನು ಮನ್ನಿಸಿದ್ದು, ಉಃಶಾಪವಲ್ಲ. ತೃಣ ಬಿಂದುವಿನ ಕನ್ಯೆಗೆ ಶಾಪದ ಫಲವಾಗಿ ಗರ್ಭಧಾರಣೆಯಾಗಿದ್ದರೂ ಕೊನೆಯಲ್ಲಿ ಆ ಶಾಪವು ವರವಾಗಿ ಪರಿಣಮಿಸಿದೆ.

೩೯. ವಿಶ್ರವಾ < ಕೈಕಸಿ
ಉತ್ತರಕಾಂಡ/೯'

ಸುಮಾಲಿ ರಾಕ್ಷಸನ ಮಗಳಾದ ಕೈಕಸಿಯು ಬಹಳ ಸುಂದರಿಯಾಗಿದ್ದಳು. ಅವಳು ಮದುವೆಯ ವಯಸ್ಸಿಗೆ ಬಂದಾಗ ಅನೇಕರು ಅವಳನ್ನು ಮದುವೆಯಾಗುವ ಪ್ರಸ್ತಾಪ ಮಾಡಿದ್ದರು; ಆದರೆ ಸುಮಾಲಿಯು ಯಾವ ಪ್ರಸ್ತಾಪಕ್ಕೂ ಒಪ್ಪಿರಲಿಲ್ಲ. ನಂತರ ಒಪ್ಪಿಗೆ ಸಿಗುವುದಿಲ್ಲವೆಂಬ ತಿಳುವಳಿಕೆಯಿಂದ ಯಾರೂ ಪ್ರಸ್ತಾಪವನ್ನೇ ಮುಂದಿಡಲಿಲ್ಲ. ಕೈಕಸಿಯ ಮದುವೆಯ ಪ್ರಾಯವು ದಿನೇದಿನೇ ಬೆಳೆಯುತ್ತ ಹೋಯಿತು. ಅವಳ ಯೌವನದ ಪ್ರಾಯವು ವ್ಯರ್ಥಗೊಳ್ಳುತ್ತಿದೆ ಎಂಬ ಚಿಂತೆಯು ಸುಮಾಲಿಗೆ ಕಾಡಹತ್ತಿತ್ತು. ಆತನು ತನ್ನ ಕನ್ಯೆಗೆ ಈ ರೀತಿ ಹೇಳಿದನು-
“ನೀನು ಸಾಕ್ಷಾತ್ ಲಕ್ಷ್ಮಿಯಂತಿರುವೆ; ಧರ್ಮನಿಷ್ಠರಾದ ನಾವು ನಿನ್ನ ಮೂಲಕ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ. ಕುಲದ ಪ್ರತಿಷ್ಠೆಗೌರವಗಳ ಧ್ಯಾನಿಸುವವರಿಗೆ, ಕನ್ಯೆಯ ತಂದೆಯಾಗಿರುವದು ಬಹು ಕ್ಲೇಶಕರವಾಗಿರುತ್ತದೆ; ಆದ್ದರಿಂದ ಮುನಿಗಳಲ್ಲಿ ಉತ್ತಮನಾದ, ಬ್ರಹ್ಮದೇವನ ಕುಲದಲ್ಲಿ ಜನಿಸಿದ, ಪುಲಸ್ತ್ಯನ ಪುತ್ರನಾಗಿರುವ, ಶ್ರೇಷ್ಠನಾಗಿರುವ 'ವಿಶ್ರವಾ'ನನ್ನು ನೀನಾಗಿ ವರಿಸು! ಸೂರ್ಯನಂತೆ ತೇಜಸ್ಸುಳ್ಳ, ಧನಾಧಿಪತಿಯಂತಿರುವವನಿಂದ ಆತನಂತಹ ಮಕ್ಕಳನ್ನು ನೀನು ನಿಸಃಶಯವಾಗಿ ಪಡೆಯುವೆ.