ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೭೯


ಮಿತ್ರನ ಶಾಪದಂತೆ ಉರ್ವಶಿಯು ಮನುಷ್ಯ ಲೋಕದಲ್ಲಿರುವ ಪುರೂರವ ರಾಜನತ್ತ ಹೋದಳು. ಕೆಲವು ನಿರ್ಬಂಧಗಳನ್ನು ಹಾಕಿ ಅವನ ಜೊತೆ ಇದ್ದಳು.

೫೩. ಭಾರ್ಗವ < ಯಯಾತಿ

ಉತ್ತರಕಾಂಡ/೫೮

"ನಿಮಿರಾಜನು ಶೂರನು, ಕ್ಷತ್ರಿಯನು, ವಿಶೇಷದಲ್ಲಿ ದೀಕ್ಷೆಯನ್ನು ಕೈಕೊಂಡವನಾಗಿದ್ದನು. ಹೀಗಿರುವಾಗ ವಸಿಷ್ಠ ಮುನಿಯೊಡನೆ ಆತನು ಸರಿಯಾಗಿ ವರ್ತಿಸಲಿಲ್ಲ" ಎಂಬ ತನ್ನ ಅನಿಸಿಕೆಯನ್ನು ಲಕ್ಷ್ಮಣನು ರಾಮನಿಗೆ ನುಡಿದನು. ರಾಮನು ಅದಕ್ಕೆ "ಕ್ಷಮಾವೃತ್ತಿಯು ಎಲ್ಲರಲ್ಲಿ ಇರುತ್ತದೆ ಎಂದು ಹೇಳಲಾಗುವದಿಲ್ಲ. ರೋಷವು ತುಂಬ ದುಃಸಹವಾದದ್ದು" ಎಂದು ಹೇಳಿ ಅದನ್ನು ಪುಷ್ಟಿಸಲು ಯಯಾತಿಯ ಶಾಪದ ಕಥೆಯನ್ನು ಹೇಳಿದನು.
ನಹುಷಪುತ್ರನಾದ ಯಯಾತಿಯು ಸತ್ವಗುಣಸಂಪನ್ನನಾಗಿದ್ದನು. ಆತನಿಗೆ ಶರ್ಮಿಷ್ಠೆ ಹಾಗೂ ದೇವಯಾನಿ ಎಂಬ ಇಬ್ಬರು ಪತ್ನಿಯರಿದ್ದರು. ಶರ್ಮಿಷ್ಠೆಗೆ ಪುರು ಮತ್ತು ದೇವಯಾನಿಗೆ ಯದು ಈ ರೀತಿ ಇಬ್ಬರು ಪುತ್ರರಿದ್ದರು. ಪುರುವಿನ ಸಹಜಗುಣಗಳಿಂದಲೂ, ಶರ್ಮಿಷ್ಠೆಯನ್ನು ಯಯಾತಿಯು ಅಧಿಕಪ್ರೀತಿಸುತ್ತಿದ್ದ ಕಾರಣದಿಂದಲೂ ಪುರುವು ಯಯಾತಿಗೆ ಅಧಿಕಪ್ರೀತಿಯವನಾಗಿದ್ದನು. ಈ ಸಂಗತಿಯು ಯದುವನ್ನು ಕಾಡುತ್ತಿತ್ತು. ಯದುವು ಒಮ್ಮೆ ತಾಯಿಯಾದ ದೇವಯಾನಿಗೆ ಈ ರೀತಿ ಎಂದನು: "ನೀನು ಭಾರ್ಗವಕುಲದಲ್ಲಿ ಹುಟ್ಟಿ ಈ ರೀತಿ ದುಃಖ, ಅವಮಾನಗಳನ್ನು ಸಹಿಸುತ್ತಿರುವಿ; ಇದನ್ನು ಸಹಿಸುವ ಬದಲು ನಾವಿಬ್ಬರೂ ಅಗ್ನಿಪ್ರವೇಶ ಮಾಡೋಣ! ದೈತ್ಯಕನ್ಯೆಯಾದ ಶರ್ಮಿಷ್ಠೆಯೊಡನೆ ರಾಜನು ಬೇಕಾದಷ್ಟು ಕಾಲ ಬಾಳಲಿ! ಅಗ್ನಿ ಪ್ರವೇಶ ಮಾಡುವದು ನಿನಗೆ ಇಷ್ಟವಿರದಿದ್ದರೆ ನನಗಾದರೂ ಅನುಮತಿಯನ್ನು ಕೊಡು! ಇನ್ನು ಮುಂದೆ ಈ ಬಗೆಯ ಅವಮಾನವನ್ನು ನಾನು ಸಹಿಸಲಾರೆನು. ನಾನು ಪ್ರಾಣತ್ಯಾಗವನ್ನು ಮಾಡುವದು ಖಂಡಿತ" ಎಂದನು. ಪುತ್ರನ ಸಂತಾಪದ ನುಡಿಗಳು ತಾಯಿಯ ಹೃದಯಕ್ಕೆ ತಾಗಿದವು. ಆಕೆಗೆ ವಿಪರೀತ ಸಿಟ್ಟು ಬಂದಿತು. ಪಿತನಾದ ಶುಕ್ರಾಚಾರ್ಯನ ಸ್ಮರಣೆಯನ್ನು ಅವಳು ಮಾಡುತ್ತಲೇ ಅವನು ಕೂಡಲೇ ಅಲ್ಲಿಗೆ ಬಂದನು. ದೇವಯಾನಿಯ ದುಃಖಾವಸ್ಥೆಯನ್ನು ಕಂಡು ವ್ಯಥಿತನಾದನು. ದುಃಖದ ಕಾರಣವನ್ನು ಕೇಳಿದಾಗ ಅವಳು "ನಾನು ಅಗ್ನಿಪ್ರವೇಶ ಮಾಡಲಿರುವೆ.