ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವರದಾನ

೩೩೫


ಎಂದು ಅರಿತುಕೊಂಡ ನಂತರ ಮೇಘನಾದನು 'ಒಂದು ವಿಶಿಷ್ಟ ಸನ್ನಿವೇಶ,
ಪರಿಸ್ಥಿತಿಯಲ್ಲಿ ಮಾತ್ರ ನನಗೆ ಮರಣವು ಬರಬೇಕು; ಅನ್ಯಥಾ ಅಮರತ್ವವಿರಬೇಕು'
ಎಂಬ ಕರಾರುವಾಕ್ಕಾದ ವರವನ್ನು ಎರಡನೆಯ ಬೇಡಿಕೆಯಾಗಿಟ್ಟನು. ಹೀಗೆ
ಬ್ರಹ್ಮದೇವನನ್ನು ಮಾತಿನ ಕಟ್ಟು-ಬಂಧನಕ್ಕೆ ಸಿಲುಕಿಸಿ ತನಗೆ ಇಷ್ಟವಿದ್ದ ವರವನ್ನು
ಸಾಧಿಸಿಕೊಂಡನು.
ಎಲ್ಲರಂತೆ ತಪಸ್ಸನ್ನಾಚರಿಸಿ, ದೇವತೆಗಳನ್ನು ಪ್ರಸನ್ನಗೊಳಿಸಿ ವರಗಳನ್ನು
ಯಾಚಿಸುವ, ರೂಢವಾಗಿದ್ದ ಪ್ರಕಾರವು ಮೇಘನಾದನಿಗೆ ಹಿಡಿಸುವದಿಲ್ಲ.
ಸ್ವಸಾಮರ್ಥ್ಯದಿಂದ ವರಗಳನ್ನು ದೊರಕಿಸಿಕೊಲ್ಳುವ ಜಾಜ್ವಲ್ಯ ಅಹಂಕಾರವು
ಆತನಲ್ಲಿತ್ತು. ಈ ಸಂದರ್ಭದಲ್ಲಿ 'ಮದಾಯತ್ತಂ ತು ಪೌರುಷಮ್' ಎಂಬ
ಮಹಾಭಾರತದಲ್ಲಿಯ ಕರ್ಣನ ಉದ್ಗಾರದ ನೆನಪಾಗುತ್ತದೆ.

೬೬. ಸೂರ್ಯ < ಮೇರು

ಉತ್ತರಕಾಂಡ/೩೫

ರಾಮನು ಪ್ರಶ್ನಿಸಿದ್ದರಿಂದ ಅಗಸ್ತ್ಯಮುನಿಯು ಹನುಮಂತನ ಬಾಲ್ಯಾವಸ್ಥೆಯ
ವೃತ್ತಾಂತವನ್ನು ಅರುಹುತ್ತಿದ್ದಾನೆ.
ಹನುಮಂತನ ಬಲವು ರಾವಣ, ವಾಲಿಯರ ಸಾಮರ್ಥ್ಯಕ್ಕಿಂತ ಮಿಗಿಲಾದದ್ದು
ಎಂಬ ವಿಶ್ವಾಸ ರಾಮನದಾಗಿತ್ತು. ಅಷ್ಟೇ ಅಲ್ಲದೆ, ಹನುಮಂತನಲ್ಲಿ ಅನೇಕ
ಸದ್ಗುಣಗಳು ಸೇರಿಕೊಂಡಿದ್ದವು. ಅವನು ಶೌರ್ಯ, ದಕ್ಷತೆ, ಬುದ್ದಿವಂತಿಕೆ,
ರಾಜನೀತಿ, ರಾಜಕೀಯ ಕೃತ್ಯಗಳನ್ನು ಸಾಧ್ಯಗೊಳಿಸಿಕೊಳ್ಳುವ ನೈಪುಣ್ಯ, ಪರಾಕ್ರಮ,
ಪ್ರಭಾವ ಇತ್ಯಾದಿ ಗುಣಗಳ ಖಣಿಯಾಗಿದ್ದನು. ಹನುಮಾನನ ಬಗ್ಗೆ ರಾಮನಿಗೆ
ವಿಲಕ್ಷಣವಾದ ಆದರಭಾವವು ಇದ್ದುದರಿಂದ ಆತನ ಬಾಲ್ಯವನ್ನು ಅರಿತುಕೊಳ್ಳುವ
ತವಕ ರಾಮನಿಗೆ ಉಂಟಾಗಿತ್ತು.
ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಾನೆ: “ಹೇ ರಘುವಂಶ
ತಿಲಕೋತ್ತಮನೇ, ಬಲ, ಗತಿ ಮತ್ತು ಮತಿ ಇವುಗಳ ಬಗ್ಗೆ ಹನುಮಾನನಿಗೆ
ಸರಿಸಮಾನರು ಯಾರೊಬ್ಬರೂ ಇಲ್ಲ. 'ಹನುಮಾನನು ಬಲಶಾಲಿಯಿದ್ದರೂ
ತನ್ನ ಸ್ವ-ಬಲವನ್ನು ಅರಿಯಲಾರನು'- ಈ ರೀತಿಯ ಶಾಪವು ಆತನಿಗಿತ್ತು.
ಹನುಮಾನನ ಬಾಲ್ಯದಲ್ಲಿಯ ಪರಾಕ್ರಮಗಳು ಅತುಲನೀಯವಾಗಿವೆ.”
ಸೂರ್ಯದತ್ತವರಸ್ವರ್ಣಃ ಸುಮೇರುರ್ನಾಮ ಪರ್ವತಃ ‖೧೯‖