ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೭೫


ಈ ಮೂವರಿಗೂ ಮೊಲೆಯುಣಿಸಿದಳು. ಈ ತ್ರಿಮೂರ್ತಿಗಳು ನಂತರ ಅಂಶ ರೂಪವಾಗಿ ದತ್ತಾತ್ರೇಯ, ದುರ್ವಾಸ ಮತ್ತು ಚಂದ್ರ ಎಂಬ ಮೂರು ಪುತ್ರರಾದ ಮಾಹಿತಿ ಇದೆ.

೮. ಅಂಬರೀಷ

ತ್ರಿಶಂಕುವಿನ ಇಬ್ಬರು ಮಕ್ಕಳಲ್ಲಿ ಅಂಬರೀಷನು ಚಿಕ್ಕವನು. ಈತನಿಗೆ ಶ್ರೀಮತಿ ಎಂಬ ಓರ್ವ ಕನ್ಯೆಯಿದ್ದಳು. 'ನಾರದ ಮತ್ತು ಪರ್ವತ ಇವರಲ್ಲಿಯ ವಾದವಿವಾದದಲ್ಲಿ, ವಿಷ್ಣುವು ಈ ಕನ್ಯೆಯನ್ನು ಪಡೆದುಕೊಂಡನು'- ಎಂಬ ಉಲ್ಲೇಖವು ಅದ್ಭುತರಾಮಾಯಣದಲ್ಲಿದೆ. ಒಮ್ಮೆ ಕಾರ್ತೀಕಮಾಸದ ಏಕಾದಶಿಯ ವ್ರತವಿದ್ದಾಗ ದ್ವಾದಶಿಯ ದಿನದಂದು ದುರ್ವಾಸಋಷಿಯು ಅತಿಥಿಯೆಂದು ಬಂದನು. ದುರ್ವಾಸನು ನದಿಗೆ ಸ್ನಾನಕ್ಕೆಂದು ಹೋಗಿ ಪ್ರಾತಃಕರ್ಮಗಳನ್ನು ಪೂರೈಸಿ ಮರಳಿ ಬರುವವರೆಗೆ ದ್ವಾದಶಿಯ ಸಮಯವು ಮೀರಿಹೊಗುತ್ತದೆ ಎಂದು ತಿಳಿದು ಅಂಬರೀಷನು ನೈವೇದ್ಯವನ್ನು ಮಾಡಿ ತೀರ್ಥ ಪ್ರಾಶನ ಮಾಡಿ ಪಾರಣೆಯನ್ನು ಪೂರೈಸಿದನು. ಇದನ್ನರಿತ ದುರ್ವಾಸನು ಕೋಪಗೊಂಡು ತನ್ನ ಜಟೆಯಿಂದ 'ಕೃತ್ಯೆ'ಯನ್ನು ನಿರ್ಮಿಸಿ ಅಂಬರೀಷನ ಮೇಲೆ ಬಿಟ್ಟನು. ವಿಷ್ಣುವು ಸುದರ್ಶನ ಚಕ್ರದಿಂದ ಆ ಕೃತ್ಯೆಯನ್ನು ನಾಶಗೊಳಿಸಿದ ನಂತರ, ಆ ಚಕ್ರವು ದುರ್ವಾಸನ ಬೆನ್ನುಹತ್ತಿತು. ವಿಷ್ಣುವು ದುರ್ವಾಸನಿಗೆ ಸಂರಕ್ಷಣೆಯನ್ನು ನಿರಾಕರಿಸಿ, ಆತನಿಗೆ ಅಂಬರೀಷನ ಬಳಿ ಹೋಗಲು ಹೇಳಿದನು. ದುರ್ವಾಸನಿಗೆ ಅಂಬರೀಷನ ಬಳಿ ಬರಲು ಒಂದು ವರ್ಷದ ಸಮಯ ಹಿಡಿಯಿತು. ಆವರೆಗೆ ಅಂಬರೀಷನು ಉಪವಾಸವಿದ್ದನು. ಆತನು ದುರ್ವಾಸನನ್ನು ಸ್ವಾಗತಿಸಿ, ಆ ಚಕ್ರವನ್ನು ಸ್ತುತಿಯಿಂದ ಪ್ರಾರ್ಥಿಸಿದ ನಂತರ ಅದು ಮರಳಿ ವಿಷ್ಣುವಿನತ್ತ ಹೋಯಿತು. ಅಂಬರೀಷನು ಋಷಿಗೆ ಉತ್ತಮ ಭೋಜನವನ್ನು ಕೊಟ್ಟನೆಂದು ಭಾಗವತದಲ್ಲಿದೆ. ಅಂಬರೀಷನು 'ಪಕ್ಷವರ್ಧಿನಿ' ಏಕಾದಶಿಯ ವ್ರತವನ್ನು ಕೈಗೊಂಡಿದ್ದನು; ಹಾಗೂ ಯೋಗ್ಯ ಸಮಯಕ್ಕೆ ದ್ವಾದಶಿಯನ್ನು ಪೂರೈಸಿದ್ದರಿಂದ ವಿಷ್ಣುವಿಗೆ ಪ್ರಿಯನಾದನೆಂದು ಪದ್ಮಪುರಾಣದಲ್ಲಿದೆ. ಅಂಬರೀಷನು ಸ್ವರ್ಗವನ್ನು ಸೇರಿದಾಗ ಅಲ್ಲಿ ಸುದೇವನೆಂಬ ಸೇನಾಪತಿಯನ್ನು ಕಂಡನು. ರಣಾಂಗಣದಲ್ಲಿ ವೀರಮರಣವನ್ನು ಹೊಂದಿದ್ದರಿಂದ ಆತನಿಗೆ ಸ್ವರ್ಗವು ದೊರಕಿದೆ ಎಂದುಇಂದ್ರನು ತಿಳಿಸಿದನು. ಅಂಬರೀಷನಿಗೆ ಮೂವರು ಪುತ್ರರಿದ್ದರು.
ಕ್ರಮಸಂಖ್ಯೆ ೧೮, ಋಚೀಕ- ಪರಿಶೀಲಿಸಿ.