ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೦೭


೫೧. ತ್ರಿಶಿರ

ಈತನು ರಾವಣನ ಒಬ್ಬ ಮಗನಾಗಿದ್ದನು. ಕುಂಭಕರ್ಣನ ವಧೆಯಿಂದ
ತುಂಬಾ ವ್ಯಥಿತನಾದ ರಾವಣನಿಗೆ ಇವನು ಸಮಾಧಾನ ಹೇಳಿ ರಾಮನ
ಪಾರಿಪತ್ಯವನ್ನು ಮಾಡುವ ಪ್ರತಿಜ್ಞೆಯನ್ನು ತೊಟ್ಟನು. ತೀಕ್ಷ್ಣ ಶೂಲವೊಂದನ್ನು
ಎತ್ತಿಕೊಂಡು, ಬಿಳಿಯ ವೃಷಭವನ್ನೇರಿ ರಣರಂಗದತ್ತ ಧುಮುಕಿದನು. ಈತನು
ಮೂರು ಕಿರೀಟಗಳನ್ನು ಧರಿಸಿದ್ದನು. ನರಾಂತಕನು ವಧೆಗೊಂಡಾಗ ಇವನು
ವಿಲಾಪ-ಆಕ್ರೋಶ ಮಾಡಿದನು. ಈತನು ಅಂಗದ ಹಾಗೂ ಹನುಮಾನನೊಡನೆ
ಯುದ್ಧ ಮಾಡಿದನು; ಹನುಮಾನನಿಂದ ಹತನಾದನು.
ತ್ರಿಶಿರ ಎಂಬ ಹೆಸರಿನ ಇನ್ನೊಬ್ಬ ರಾಕ್ಷಸನು ಜನಸ್ಥಾನದಲ್ಲಿದ್ದನು. ಆತನು
ಖರನ ಸೇನಾಪತಿಯಾಗಿದ್ದನು. ರಾಮನು ಆತನನ್ನು ವಧಿಸಿದನು.

೫೨. ದನು

ಇವಳು ದಕ್ಷನ ಮಗಳಾಗಿದ್ದು ಕಶ್ಯಪನ ಭಾರ್ಯೆಯಾಗಿದ್ದಳು. ಇವಳು
ಅಶ್ವಗ್ರೀವನನ್ನು ಹೆತ್ತಳು. ಇವಳಿಂದ ದಾನವರ ಉತ್ಪತ್ತಿಯಾಯಿತು. ವೃತ್ರನೂ
ಸಹ ಈಕೆಯ ಮಗನೇ.

೫೩. ದಂಡಕ

ಇವನು ಇಕ್ಷ್ವಾಕುವಿನ ನೂರು ಪುತ್ರರಲ್ಲಿ ತೀರಾ ಚಿಕ್ಕವನು. ಇವನು ಅತ್ಯಂತ
ಶೂರನೂ, ಬುದ್ದಿವಂತನೂ ಆಗಿದ್ದನು; ಆದರೆ 'ಘೋರ' ಎಂಬ ದೋಷವು
ಇವನೆಲ್ಲಿದ್ದುದರಿಂದ ಈತನು ಮೂಢನೂ ವಿದ್ಯಾಹೀನನೂ ಉನ್ಮತ್ತನೂ ಆಗಿದ್ದನು.
ದೂರಪ್ರದೇಶದಲ್ಲಿಯ ವಿಂಧ್ಯ ಹಾಗೂ ಶೈಬಿಲ ಪರ್ವತದಲ್ಲಿಯ ರಾಜ್ಯವನ್ನು
ಇಕ್ಷ್ವಾಕುವು ಈತನಿಗೆ ವಿಚಾರ ಮಾಡಿಯೇ ಕೊಟ್ಟಿದ್ದನು. ವಿಂಧ್ಯಪರ್ವತದ
ಎರಡು ಶಿಖರಗಳ ಮಧ್ಯೆ ಇವನು ಮಧುಮತ್ತ ಅಥವಾ ಮಧುಮಂತ ಎಂಬ
ನಗರವನ್ನು ನಿರ್ಮಿಸಿದನು. ಉಶನಸ್ ಶುಕ್ರನು ಈತನ ಪುರೋಹಿತನಾಗಿದ್ದನು.
ಗುರುಕನ್ಯೆಯಾದ 'ಅರಜಾ'ಳೊಡನೆ ಇವನು ಬಲಾತ್ಕಾರದ ಸಂಭೋಗವನ್ನು
ಮಾಡಿದನು. ಆಗ ಕೋಪಗೊಂಡ ಭಾರ್ಗವ(ಶುಕ್ರ)ನು ಇವನಿಗೆ ಮತ್ತು ಇವನ
ಪ್ರದೇಶವಾದ ದಂಡಕಾರಣ್ಯಕ್ಕೆ ಶಾಪವಿತ್ತನು. ಈತನಿಗೆ ದಂಡಕನೆಂಬ ಹೆಸರೂ
ಇತ್ತೆಂದು ತಿಳಿದುಬರುತ್ತದೆ.