ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೨೧

ಕೊಡುತ್ತಿರಬಹುದು. ರಾಮಾಯಣ ದಲ್ಲಿದ್ದ ಎಂಬತ್ನಾಲ್ಕು ವರಗಳಲ್ಲಿ ದೇವರು ಅರವತ್ತು ವರಗಳನ್ನು ಕೊಟ್ಟಿದ್ದಾರೆ. ಮಾನವರು ಕೇವಲ ಹತ್ತೊಂಬತ್ತು ವರಗಳನ್ನು ಕೊಟ್ಟಿದ್ದಾರೆ. ಅರವತ್ತೊಂದು ಶಾಪಗಳಲ್ಲಿ ದೇವರಿಂದ ಬಂದ ಶಾಪಗಳು ಕೇವಲ ಏಳು; ಮಾನವರು ಕೊಟ್ಟ ಶಾಪಗಳ ಸಂಖ್ಯೆ ನಾಲ್ವತ್ನಾಲ್ಕು ಆಗಿದೆ. ಮಾನವರು ಕೊಟ್ಟ ಶಾಪದಿಂದ ಬಿಡುಗಡೆ ಇಲ್ಲ. ಬ್ರಹ್ಮನು ಸೃಷ್ಟಿಕರ್ತನು, ಸರ್ವಾಧಿಕಾರಿ. ಅವನು ಕೊಟ್ಟ ವರಗಳ ಸಂಖ್ಯೆ ಇಪ್ಪತ್ತು; ಎಲ್ಲರಿಗಿಂತ ಅಧಿಕವಾಗಿದೆ.

ಒಳ್ಳೆಯ ಚಾರಿತ್ರ್ಯ, ಸತ್ಯವರ್ಧನೆ ಕರ್ತವ್ಯದಕ್ಷತೆ ಮತ್ತು ಪಾತಿವ್ರತ್ಯ ಈ ಗುಣಗಳುಳ್ಳವರಿಗೆ ತಪಸ್ಸಿನ ಸಾಮರ್ಥ್ಯ ಹೊಂದಿದ ವ್ಯಕ್ತಿ ಎಂದೆನ್ನಬಹುದು.

ದಶರಥನು ಮತ್ತು ರಾಮನು ಈ ಅರ್ಹತೆಯನ್ನು ಹೊಂದಿದ್ದರು. ದಶರಥನು ಕೈಕೇಯಿಗೆ ವರಗಳನ್ನು ನೀಡಿದ್ದಾನೆ. ಅವುಗಳ ಬಗ್ಗೆ ಮತ್ತು ಪಾತಿವ್ರತ್ಯದ ಬಗ್ಗೆ ಮುಂದೆ ಹೇಳಲಾಗಿದೆ. ರಾಮನು ತನ್ನ ಈ ಯೋಗ್ಯತೆಯನ್ನು ಹೆಚ್ಚಾಗಿ ಬಳಸಲಿಲ್ಲ. ಆತನು ಪ್ರಸ್ರವಣ ಪರ್ವತಕ್ಕೆ ಮತ್ತು ನದಿಗೆ ಶಾಪದ ಬೆದರಿಕೆ ಹಾಕಿ ಒಂದು ಶರತ್ತನ್ನು ಹಾಕಿದನು. ಆ ಶರತ್ತನ್ನು ಪಾಲಿಸಿದ ಕಾರಣ ರಾಮನ ಶಾಪದ ಪರಿಣಾಮವು ಅವರಿಗೆ ಅಂಟಲಿಲ್ಲ. ರಾಮನು 'ಮರುಪ್ರದೇಶಕ್ಕೆ ಮತ್ತು ಅಲ್ಲಿಯ ಪ್ರಜೆಗಳಿಗೆ ವರಗಳನ್ನು ಕೊಟ್ಟಿದ್ದಾನೆ. ಶಂಬೂಕನು ಬೇಡಿಕೊಂಡ ವರವನ್ನು ಆತನಿಗೆ ಕೊಡಲಿಲ್ಲ. ಸೀತೆಗೆ ವರವನ್ನು ಕೊಟ್ಟಿದ್ದರೂ ಅದು ಅವಳ ಪಾಲಿಗೆ ಶಾಪವೇ ಆಯಿತು.

ಶಾಪ ಮತ್ತು ವರ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ; ಒಂದರ ಪರಿಣಾಮದ ಸ್ವರೂಪವು ಸಂಹಾರಕ; ಇನ್ನೊಂದರದು ಸಂರಕ್ಷಕವಿರುತ್ತದೆ. ಶತ್ರುಗಳ ನಾಶ, ಸಾವು, ವಧೆ, ಧ್ವಂಸ ಹಾಗೂ ಉಪದ್ರವ ಇವು ಶಾಪಗಳ ಉದ್ದೇಶ ವಾಗಿರುತ್ತದೆ. ವರಗಳಲ್ಲಿ ಸದ್ಭಾವನೆಯಿರುವುದರಿಂದ ಮಂಗಲಕರ, ಉಪಕಾರದ, ಅಭೀಷ್ಟ ಚಿಂತನೆಯ ಮನೋಭಾವ ಅವುಗಳಲ್ಲಿರುತ್ತದೆ. ಮೃತ್ಯುವೆಂಬುದು ಶಾಪದ ವಿಷಯ; ವರದಲ್ಲಿ ಮೃತ್ಯು ಇರುವುದಿಲ್ಲ. ಹೀಗಿದ್ದರೂ ರಾಮಾಯಣ ದಲ್ಲಿಯ ಒಂದು ವರವು ಮೃತ್ಯುವಿನ ಬಗ್ಗೆ ಕೊಡಲಾಗಿದೆ. ಬ್ರಹ್ಮನು ಮೇಘ ನಾದನಿಗೆ ಮೃತ್ಯುವಿನ ವರವನ್ನು ಕೊಟ್ಟಿದ್ದಾನೆ. (ವರಗಳ ಪಟ್ಟಿ ಕ್ರ. ನಂ. ೬೫) ಈ ವರವು ಅಪವಾದ ರೂಪವಾಗಿದೆ. ಸಂಪೂರ್ಣ ಅಮರತ್ವ ಸಿಗುವುದು ಸಾಧ್ಯವಿಲ್ಲವೆಂದು ತಿಳಿದುಕೊಂಡನಂತರ ಮೇಘನಾದನು ತನಗೆ ಯಾವ ಪರಿಸ್ಥಿತಿಯಲ್ಲಿ ಮರಣ ಬರಬೇಕೆಂಬುದನ್ನು ಸ್ಪಷ್ಟಪಡಿಸಿದನು; ಅದಕ್ಕೆ ಬ್ರಹ್ಮನು 'ತಥಾಸ್ತು' ಎಂದನು.