ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩ಂ

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಡೆಸಿದನು. ಆಗ ರಾವಣನಿಗೆ ಶಾಪವನ್ನು ಕೊಡಲೇಬೇಕಾಯಿತು. ಕುಂಭಕರ್ಣನ

ಅಪಾರಸಾಮರ್ಥ್ಯವನ್ನು ಪ್ರತಿಭಟಿಸಲು ಆತನಿಗೆ ಘೋರನಿದ್ರೆಯ ಶಾಪವನ್ನು
ಕೊಡಬೇಕಾಯಿತು. ತಾನು ಕೊಟ್ಟ ವರಗಳು ಸುಳ್ಳು ಎಂದಾಗಬಾರದೆಂದು
ಬ್ರಹ್ಮನು ಬಹಳ ಎಚ್ಚರಿಕೆ ವಹಿಸುತ್ತಿದ್ದನು. ರಾವಣ ಮತ್ತು ಯಮ ಇವರಲ್ಲಿ ಯುದ್ಧ
ನಡೆದಾಗ ಯಮನು ರಾವಣನನ್ನು ಸಾಯಿಸಲು ಕಾಲದಂಡನನ್ನೇ ಎತ್ತಿಕೊಂಡನು.
ಕಾಲದಂಡದಿಂದ ರಾವಣನ ಸಾವು ನಿಶ್ಚಿತವಿತ್ತು. ಆಗ ಬ್ರಹ್ಮನು ತಾನು ರಾವಣನಿಗೆ
ಕೊಟ್ಟ ವರವು ಸುಳ್ಳಾಗಬಾರದೆಂದು ಯಮನಿಗೆ ಕಾಲ ದಂಡವನ್ನು
ಹಿಂತೆಗೆದುಕೊಳ್ಳಲು ಹೇಳಿದನು. ರಾವಣ ಮತ್ತು ನಿವಾತಕವಚ ಈ ಇಬ್ಬರಿಗೂ
ಕೊಟ್ಟ ವರದಂತೆ ಇವರಿಬ್ಬರಲ್ಲಿ ಸ್ನೇಹವನ್ನುಂಟುಮಾಡಿದನು.
ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಪುಷ್ಪಕವಿಮಾನವನ್ನು ಬ್ರಹ್ಮದೇವನು
ಕುಬೇರನಿಗೆ ಕೊಟ್ಟನು. ಇಂದ್ರನಿಗೆ ವೈಷ್ಣವಯಾಗವನ್ನು ಮಾಡಿಸಿದನು. ಚಂದ್ರನಿಗೆ
ಕಾಟ ಕೊಡುತ್ತಿದ್ದ ರಾವಣನಿಗೆ ಒಂದು ಮಂತ್ರವನ್ನು ಕೊಟ್ಟು ಸುಮ್ಮನಿರಿಸಿದನು.
ದೇವತೆಗಳ ಕಾರ್ಯವನ್ನು ಸಾಧ್ಯಮಾಡಿಕೊಳ್ಳಲು, ವಿಷ್ಣುವು ಮಾನವ ಅವತಾರವನ್ನು
ತಾಳಬೇಕೆಂದು ದೇವತೆಗಳಿಂದ ಪ್ರಾರ್ಥಿಸಿಲ್ಪಟ್ಟನು. ಆಹಾರಪಾನೀಯಗಳನ್ನು
ತ್ಯಜಿಸಿದ ಸೀತೆಯು ಬದುಕಿ ಉಳಿಯಬೇಕೆಂದು, ಹವಿಷ್ಯಾನ್ನವನ್ನು ಆಕೆಗೆ
ತಲುಪಿಸಲು ಇಂದ್ರನಿಗೆ ಸೂಚಿಸಿದನು; ಮತ್ತು ಇಂದ್ರನನ್ನು ಈ ಕೆಲಸಕ್ಕಾಗಿಯೇ
ಲಂಕೆಗೆ ಕಳುಹಿದನು. ಮಹಾಪ್ರಸ್ಥಾನದ ನಂತರ ವಿಷ್ಣುವಿನ ತೇಜಸ್ಸಿನಲ್ಲಿ
ವಿಲೀನವಾಗುವ ರಾಮನನ್ನು ಈತನು ಸ್ವಾಗತಿಸಿದನು.

೮೩. ಬ್ರಹ್ಮಹತ್ಯೆ

ಬ್ರಹ್ಮದೇವನ ರುಂಡವನ್ನು ಭೈರವನು ತುಂಡರಿಸಿದಾಗ, ಶಂಕರನು ಓರ್ವ
ಸ್ತ್ರೀಯನ್ನು ಸೃಷ್ಟಿಸಿದನು. ಇವಳೇ ಬ್ರಹ್ಮಹತ್ಯೆ. ಈ ಬ್ರಹ್ಮಹತ್ಯೆಗೆ ಭೈರವನನ್ನು
ಬೆನ್ನಟ್ಟಲು ಶಿವನು ಆಜ್ಞಾಪಿಸಿದನು.

೮೪. ಭಗೀರಥ

ಇವನು ದಿಲೀಪರಾಜನ ಮಗ. ಕಪಿಲಮುನಿಯ ಕೋಪದಿಂದ ಸಗರನ
ಅರವತ್ತು ಸಾವಿರ ಪುತ್ರರು ಒಮ್ಮೆಲೇ ಕಪಿಲಮುನಿಯ ಹೇಳಿಕೆಯಂತೆ ಅಂಶುಮಾನ
ಹಾಗೂ ದಿಲೀಪ ತಪಸ್ಸನ್ನಾಚರಿಸಿದರು. ಆದರೆ, ಅವರ ಪ್ರಯತ್ನವು ಅರ್ಧಕ್ಕೇ
ನಿಂತಿತು. ಅನಂತರ ಭಗೀರಥನು ಹಿಮಾಲಯಕ್ಕೆ ಹೋಗಿ ಗಂಗೆಯನ್ನು ತರಲು