ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೭೯


೧೪೧. ಸಂವರ್ತ

ಈತ ಅಂಗೀರಸನ ಮಕ್ಕಳಲ್ಲೊಬ್ಬ. ನಾರದನ ಹೇಳಿಕೆಯಂತೆ ಮರುತ್ತನು
ಈತನನ್ನು ತನ್ನ ಪುರೋಹಿತನನ್ನಾಗಿ ಮಾಡಿಕೊಂಡಿದ್ದನು. ಮರುತ್ತನ ಯಜ್ಞದಲ್ಲಿ
ವಿಘ್ನವನ್ನುಂಟುಮಾಡಲು ಇಂದ್ರನು ಅಗ್ನಿಯನ್ನು ಯೋಜಿಸಿದ್ದನು. ಆದರೆ
ಸಂವರ್ತನು ಶಾಪಕೊಡಬಹುದೆಂಬ ಭಯದಿಂದ ಆತನು ಮರಳಿ ಹೋದನು.
ಮರುತ್ತನಿಗೆ ಸಂವರ್ತನಿಂದ ಎಲ್ಲ ರೀತಿಯಲ್ಲಿ ಬೆಂಬಲವಿದ್ದುದರಿಂದ ಮರುತ್ತನ
ಯಜ್ಞದಲ್ಲಿ ಆತಂಕಗಳನ್ನುಂಟುಮಾಡಲು ಇಚ್ಛಿಸಿದ ಎಲ್ಲರ ಪ್ರಯತ್ನಗಳು
ನಿಷ್ಫಲವಾದವು.‍

೧೪೨. ಸಗರ

ಚ್ಯವನಭಾರ್ಗವ ಋಷಿಯ ಆಶೀರ್ವಾದದಿಂದ ಅಸಿತ ರಾಜನಿಗೆ ಕಾಲಿಂದಿ
ಎಂಬ ರಾಣಿಯಲ್ಲಿ ಜನಿಸಿದ ಮ. ಕಾಲಿಂದಿ ಗರ್ಭಿಣಿಯಿದ್ದಾಗ ಈಕೆಯ
ಸವತಿ ಇವಳಿಗೆ ವಿಷವನ್ನು ಕೊಟ್ಟಿದ್ದಳು. ಆ ವಿಷದಿಂದ ಯಾವ ವಿಪರೀತ
ಪರಿಣಾಮವಾಗದೇ ವಿಷಸಹಿತನಾಗಿ ಅಂದರೆ ಗರಸಹಿತನಾಗಿ ಈತನು ಹುಟ್ಟಿದ
ಕಾರಣ ಇವನಿಗೆ ಸ-ಗರನೆಂಬ ಹೆಸರು ಬಂದಿತು. ಈತನು ಬಹು
ಪರಾಕ್ರಮಿಯೂ ಸತ್ಯಧರ್ಮಿಯೂ ಸತ್ಯವನ್ನು ನುಡಿಯುವವನೂ ಆಗಿದ್ದು.
ದಾನಶೂರನೆಂದೂ ವಿಚಾರವಂತನೆಂದೂ ಅಯೋಧ್ಯೆಯ ರಾಜನೆಂದೂ
ಖ್ಯಾತನಿದ್ದನು. ಈತನಿಗೆ ಕೇಶಿನಿ ಹಾಗೂ ಸುಮತಿ ಎಂಬ ಇಬ್ಬರು ಪತ್ನಿಯರಿದ್ದರು.
ಕೇಶಿನಿಯ ಮಗನಾದ ಅಸಮಂಜನೆಂಬಾತನು ದುರಾಚಾರಿಯಾಗಿದ್ದರಿಂದ
ರಾಜನು ಈತನನ್ನು ಗಡಿಯಾಚೆ ಅಟ್ಟಿದನು. ಸಗರನು ಅಶ್ವಮೇಧ ಯಜ್ಞವನ್ನು
ಕೈಕೊಂಡಾಗ ಇಂದ್ರನು ಈ ಯಜ್ಞದ ಅಶ್ವವನ್ನು ಅಪಹರಿಸಿದ್ದನು. ಆ ಕುದುರೆಯನ್ನು
ಹುಡುಕಿತರಲು ಸುಮತಿಯ ಅರವತ್ತುಸಾವಿರ ಮಕ್ಕಳನ್ನು ಕಳುಹಿದಾಗ ಕಪಿಲನು
ಅವರೆಲ್ಲರನ್ನು ಸುಟ್ಟು ಭಸ್ಮ ಮಾಡಿದನು. ಅನಂತರ ಸಗರನ ಮೊಮ್ಮಗನಾದ
ಅಂಶುಮಾನ ಎಂಬಾತನು ಈ ಅಶ್ವಮೇಧಯಜ್ಞವನ್ನು ಪೂರ್ತಿಗೊಳಿಸಿದನು.

೧೪೩. ಸಾರಣ

ಈತನು ಲಂಕೆಯಲ್ಲಿಯ ಒಬ್ಬ ರಾಕ್ಷಸ. ಶುಕನ ಸಂಗಡ ಗುಪ್ತಚರನೆಂದು
ರಾಮನ ಸೈನ್ಯಬಲವನ್ನು ವೀಕ್ಷಿಸಲು ಬಂದಿದ್ದನು. ಶುಕ ಮತ್ತು ಸಾರಣರಿಬ್ಬರೂ
ವಾನರರ ವೇಷವನ್ನು ಧರಿಸಿದ್ದರು. ಸಾರಣನು ರಾವಣನ ಅಮಾತ್ಯನೂ ಆಗಿದ್ದನು.