ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ

೪೮೧


ವಹಿಸುತ್ತಿದ್ದಳು. ಹನುಮಾನನೊಡನೆ ಲಂಕೆಯಿಂದ ಹೋಗಲು ಬೇಡವೆಂದಳು.
ಹೀಗಿದ್ದರೂ ಇವಳ ಇಚ್ಚೆಯ ವಿರುದ್ಧ ರಾವಣನು ಇವಳನ್ನು ಎತ್ತಿಕ್ಕೊಂಡು
ಹೋಗಿದ್ದನು. ವಿರಾಧನು ಸಹ ಸೀತೆಯನ್ನು ತನ್ನ ಕೈಗಳಿಂದ ಎಳೆದುಕೊಂಡು
ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ಈ ರೀತಿ ಪರಪುರುಷರಿಂದಾದ
ಸ್ಪರ್ಶವನ್ನು ತಪ್ಪಿಸುವದು ಇವಳಿಗೆ ಸಾಧ್ಯವಾಗಲಿಲ್ಲ. ಲಕ್ಷ್ಮಣನ ಸೇವಾಭಾವ,
ಶುದ್ಧಾಚರಣೆ, ನಿಷ್ಠೆ ಹಾಗೂ ಪಾಪವಿಲ್ಲದ ಸ್ವಭಾವವನ್ನು ಸೀತೆ ಮನಗಂಡಿದ್ದರೂ,
ಆತನು ರಾಮನನ್ನು ಹುಡುಕಲು ಅತ್ತ ಹೋಗಲು ವಿಳಂಬ ಮಾಡುತ್ತಿದ್ದಾನೆ ಎಂದು ಎನಿಸಿದಾಗ ಸೀತೆಯು ಅತ್ಯಂತ ಕಠೋರವಾದ ಶಬ್ದಗಳಿಂದ ಮಾತನಾಡಿ ಆತನನ್ನು ಬಲುದುಃಖಕ್ಕೆ ಈಡುಮಾಡಿದಳು. ಆ ಸಂಗತಿ ಸೀತೆಗೆ ಗೌರವಾಸ್ಪದ ವಾಗಲಿಲ್ಲ. ಕಾಂಚನಮೃಗದ ಅವಳ ಅಭಿಲಾಷೆಯು ಸ್ತ್ರೀಯೋಗ್ಯವೆನಿಸಿದರೂ ಈ ದೆಸೆಯಿಂದ ಬಹಳ ಬೆಲೆ ತೆತ್ತಬೇಕಾಯಿತು. ರಾಮನು ಅವ್ಯಭಿಚಾರಿ ಇದ್ದಾನೆ ಎಂಬ ನಿಷ್ಠೆಯನ್ನಾಧರಿಸಿ ಇವಳು ಲಂಕೆಯಲ್ಲಿಯ ತನ್ನ ದಿನಗಳನ್ನು ಕಳೆದಳು. ರಾವಣನಿಂದ ವಧಿಸಲ್ಪಡುವ ಇಲ್ಲವೇ ಶೀಲಭ್ರಷ್ಟಳಾಗಬಹುದೆಂಬ ಭಯವು ಅವಳನ್ನು ಸತತವಾಗಿ ಕಾಡುತ್ತಿತ್ತು. ಈ ರೀತಿ ರಾವಣನ ಕೈಯಿಂದ ಸಾಯುವದಕ್ಕಿಂತ ಆತ್ಮಾರ್ಪಣೆಯೇ ಯೋಗ್ಯವೆಂದು ಅವಳಿಗೆನಿಸಿತು. ಆಗ ಬ್ರಹ್ಮ ದೇವನು ಇಂದ್ರನನ್ನು ಇವಳ ಬಳಿ ಕಳುಹಿಸಿ, ಅನ್ನತ್ಯಾಗ ಮಾಡಿ ಪ್ರಾಣತ್ಯಾಗವನ್ನು ಮಾಡಬೇಕೆಂಬ ಸೀತೆಯನ್ನು ಈ ವಿಚಾರದಿಂದ ಪರಾವೃತಗೊಳಿಸುವಂತೆ ಮಾಡಿದನು. ದೇವತೆಗಳ ಕಾರ್ಯವನ್ನು ಪೂರೈಸಲು ಇಂದ್ರನಿಂದ ಹವಿಷ್ಕಾನ್ನವನ್ನು ಸ್ವೀಕರಿಸಿ, ಧೈರ್ಯ ತಾಳಿ ಜೀವಂತವಿರಲು ಸೀತೆಗೆ ಪ್ರೋತ್ಸಾಹವನ್ನು ಕೊಟ್ಟನು. ರಾವಣನ ವಧೆಯಾದ ನಂತರ ರಾಮನನ್ನು ಭೇಟಿಯಾಗಲು ಸೀತೆ ಬಹು ಕಾತರಗೊಂಡಿದ್ದಳು. ಆದರೆ ರಾಮನ ಕರ್ಣಕಠೋರ ನುಡಿಗಳನ್ನು ಕೇಳಿ ಅವಳು ಶೋಕವಿವಶಳಾದಳು. ರಾಮನನ್ನು ಬಿಟ್ಟು ಯಾವ ಪರಪುರುಷನ ವಿಚಾರವೂ ಅವಳ ಮನಸ್ಸಿನಲ್ಲಿ ಸುಳಿದಿರಲಿಲ್ಲವಾದ್ದರಿಂದ ತನ್ನ ಶುದ್ಧತೆಯನ್ನು ಖಚಿತಪಡಿಸಲು ಅಗ್ನಿದಿವ್ಯವನ್ನು ಕೈಕೊಂಡಳು. ಇವಳ ಬಯಕೆಗಳನ್ನು ಪೂರೈಸುವ ನೆಪದಲ್ಲಿ ರಾಮನು ಜನರನ್ನು ಮೆಚ್ಚಿಸಲು ಈಕೆಯನ್ನು ತ್ಯಜಿಸಿದನು. ಆಗ ಸೀತೆ ಬಲು ನೊಂದಳು. ವಾಲ್ಮೀಕಿಯು ಇವಳನ್ನು ಬರಮಾಡಿಕೊಂಡು ಆಸರೆಯಿತ್ತನು. ಅಲ್ಲಿ ಅವಳು ಲವ-ಕುಶರಿಗೆ ಜನ್ಮವನ್ನಿತ್ತಳು. ಅಂದು ಶತ್ರುಘ್ನನು ವಾಲ್ಮೀಕಿಯ ಆಶ್ರಮದಲ್ಲಿಯೇ ಇದ್ದನು. ರಾಮನು ಹೇಳಿಕಳುಹಿದ್ದರಿಂದ ವಾಲ್ಮೀಕಿ ಋಷಿಯು ಸೀತೆಯ ಸಹಿತವಾಗಿ ರಾಜಸಭೆಗೆ ಬಂದನು. ತನ್ನ ತಪೋಬಲವನ್ನೇ ಪಣಕ್ಕಿಟ್ಟು