ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಕಾರಣಕ್ಕಾಗಿ, ಪತಿವ್ರತೆಯರು ರಾವಣನಿಗೆ ಶಾಪಗಳನ್ನು ಕೊಟ್ಟಿದ್ದಾರೆ. ಭೃಗುಪತ್ನಿಯನ್ನು ವಧಿಸಿದ್ದಕ್ಕಾಗಿ ವಿಷ್ಣುವಿಗೆ ಭೃಗುವಿನಿಂದ ಶಾಪ ದೊರೆತಿದೆ. ಭರತನು ಕೈಕೇಯಿಯನ್ನು ಕುರಿತು ಆಡಿದ ಬಿರುನುಡಿಗಳು ಶಾಪದಷ್ಟೇ ಕಟುವಾಗಿದ್ದವು. ಈ ರೀತಿಯ ಬಿರುನುಡಿಗಳಿಗೆ ದಶರಥನ ಮೃತ್ಯುವು ಒಂದು ಕಾರಣವಾಗಿತ್ತು.

ಪುಂಜಿಕಸ್ಥಲಾ, ರಂಭಾ ಇನ್ನೂ ಕೆಲವು ಪತಿವ್ರತೆಯರು, ರಾವಣನು ಅವರನ್ನು ಬಲಾತ್ಕರಿಸಿದ್ದರಿಂದ ಆತನಿಗೆ ಶಾಪವನ್ನು ಕೊಟ್ಟರು. ವೇದವತಿಯು ಶಾಪವನ್ನು ನುಡಿಯಲಿಲ್ಲ; ಆದರೆ, ರಾವಣನು ಮಾಡಿದ ಮಾನಭಂಗಕ್ಕಾಗಿ ಅವಳು ಕಠೋರ ಪಣವನ್ನು ತೊಟ್ಟಳು. ಅಹಲ್ಯೆಯು ಇಂದ್ರನ ಭೋಗಕ್ಕೆ ತುತ್ತಾದುದರಿಂದ ಗೌತಮನು ಅವಳಿಗೆ ಶಾಪವನ್ನಿತ್ತನು. ಧರ್ಮಸಮ್ಮತವಾದ ರತಿಕ್ರೀಡೆಯಲ್ಲಿ ಅಡ್ಡಿಯನ್ನುಂಟು ಮಾಡಿದ ದೇವತೆಗಳಿಗೆ ಹಾಗೂ ಅಪ್ರತ್ಯಕ್ಷವಾಗಿ ಸಹಾಯವನ್ನು ಬಗೆದ ಪೃಥ್ವಿಗೆ ಉಮಾ ಶಾಪವನ್ನು ಕೊಟ್ಟಳು. ಓರೆಗಣ್ಣಿನಿಂದ ಪಾರ್ವತಿಯತ್ತ ನೋಡಿದ ಕಾರಣ ಕುಬೇರನು ಪಿಂಗಲಾಕ್ಷನಾದನು.

ಯಜ್ಞಕರ್ಮ, ತಪಶ್ಚರ್ಯದಲ್ಲಿ ಅಡ್ಡಿ ಮಾಡಿದವರಿಗೆ ಋಷಿಗಳು ಶಾಪ ಹಾಕಿದ್ದಾರೆ. ಇಂದ್ರನ ಅಪ್ಪಣೆಯಂತೆ ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ಬಂದ ರಂಭೆಗೆ ವಿಶ್ವಾಮಿತ್ರನು ಶಾಪ ಕೊಟ್ಟನು. ಆಶ್ರಮದಲ್ಲಿಯ ಯಜ್ಞಪಾತ್ರೆಗಳನ್ನು ಧ್ವಂಸಗೊಳಿಸಿದ್ದಕ್ಕಾಗಿ ಹನುಮಂತನು ಋಷಿಗಳ ಶಾಪಕ್ಕೆ ತುತ್ತಾದನು. ಪುಲಸ್ತ್ಯನ ತಪಶ್ಚರ್ಯೆಯಲ್ಲಿ ಅಡಚಣೆಗಳು ಬರುತ್ತಿದ್ದವು; ಅದಕ್ಕಾಗಿ ಆತನು 'ಕಣ್ಣಿಗೆದುರಾಗುವ ಕನ್ಯೆಯು ಗರ್ಭವತಿಯಾಗುವಳು!' ಎಂದು ಎಂದು ಶಾಪೋದ್ಗಾರ ಮಾಡಿದನು. ತನ್ನ ತಪೋಬಲವು ಕಡಿಮೆಯಾಗಬಾರದೆಂದು ವಿಶ್ವಾಮಿತ್ರನು ಮಾರೀಚ ಹಾಗೂ ಸುಂಬಾಹು ಇವರಿಗೆ ಶಾಪವನ್ನು ಕೊಡದೇ ತಡೆಹಿಡಿದನು. ಇದೇ ಕಾರಣಕ್ಕಾಗಿ ವೇದವತಿಯು ರಾವಣನನ್ನು ಶಪಿಸಲಿಲ್ಲ. ಅದೇ ರೀತಿ ದಂಡಕಾರಣ್ಯದಲ್ಲಿದ್ದ ಋಷಿಗಳು ಅಲ್ಲಿಯ ರಾಕ್ಷಸರಿಗೆ ಶಾಪವನ್ನು ನುಡಿಯಲಿಲ್ಲ. ಕುಶಕನ್ಯೆಯರು ಸಹ ತಮ್ಮ ತಪೋಬಲವನ್ನು ಕಾಯ್ದುಕೊಳ್ಳಲು ವಾಯುವಿಗೆ ಶಾಪಹಾಕಲಿಲ್ಲ.

ಮಿತಿತಪ್ಪಿದ ವರ್ತನೆಗಾಗಿ ವಿಶ್ವಾವಸು ಎಂಬ ಗಂಧರ್ವನಿಗೆ ಶಾಪ ತಗುಲಿತು. ಆತನು ಇಂದ್ರನ ಮೇಲೆ ದಾಳಿ ಮಾಡಿದ್ದನು. ರಾವಣನು ಶಂಕರನ ಬಗ್ಗೆ ಅವಮರ್ಯಾದೆಯ ಮಾತುಗಳನ್ನಾಡಿದ್ದರಿಂದ ನಂದೀಶ್ವರನು ರಾವಣನಿಗೆ ಸರಿಯಾದ ಪಾಠ ಕಲಿಸಿದನು. ಅದೇ ರೀತಿಯಲಿ ಊರ್ವಶಿ ವರುಣನೊಂದಿಗೆ ಸಂಬಂಧ ಬೆಳೆಸಿದ್ದರಿಂದ ಪುತ್ರನ ಶಾಪಕ್ಕೆ ಗುರಿಯಾಗಬೇಕಾಯಿತು. ಬ್ರಾಹ್ಮಣರನ್ನು