ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ವಿಲಾಪ, ಅವಳ ಶೋದಕ್ಕಾಗಿ ರಾಮನು ಪಟ್ಟ ಕಷ್ಟ, ಸೀತೆಯ ಪುನಃಪ್ರಾಪ್ತಿಯಾದನಂತರ ಆಕೆಯನ್ನು ಶುದ್ಧೀಕರಿಸಿ ಸ್ವೀಕರಿಸುವ ನಿರ್ಧಾರ, ಅವಳನ್ನು ತ್ಯಿಸಿದ್ದು, ಸುಗ್ರೀವನು ಕರ್ತವ್ಯ ಚ್ಯುತನಾದಾಗ ಆತನಿಗೆ ಕೊಟ್ಟ ಎಚ್ಚರಿಕೆಯ ಮುನ್ಸೂಚನೆ, ಶೂರ್ಪನಖಿಗೆ ಮಾಡಿದ ಅಪಹಾಸ್ಯ, ಪ್ರಸಂಗಾನುಸಾರ ಅಸತ್ಯವನ್ನು ಆಶ್ರಯಿಸಬಹುದೆಂದು ಸುಮಂತನಿಗೆ ಮಾಡಿದ ಉಪದೇಶ, ಲಕ್ಷ್ಮಣನ ಬಗ್ಗೆ ಇದ್ದ ಮಿತಿಮೀರಿದ ಪ್ರೀತಿ, ಲಕ್ಷ್ಮಣನ ಅಚಲನಿಷ್ಠೆ, ಸೀತೆಯು ಲಕ್ಷ್ಮಣನನ್ನು ಸಿಕ್ಕಾಪಟ್ಟೆ ದೂಷಿಸಿದ್ದು, ಹನುಮಂತನ ಅಪಾರ ಭಕ್ತಿ, ರಾವಣನ ಅಂತ್ಯಕ್ರಿಯೆಯನ್ನು ಯಥಾಸಾಂಗವಾಗಿ ನೆರವೇರಿಸುವಂತೆ ವಿಭೀಷಣನಿಗೆ ಹೇಳುವುದು; ಇವೆಲ್ಲ ಮನುಷ್ಯಸ್ವಭಾವದ ವಿವಿಧ ದಾರ್ಶನಿಕ ಸಂಗತಿಗಳಾಗಿವೆ. ಇವು ರಾಮಾಯಣದ ಪುಟಪುಟಗಳಲ್ಲಿ ಹರಡಿಕೊಂಡಿವೆ. ಸ್ತ್ರೀಸ್ವಭಾವವಾಗಿರುವ ಉಜ್ವಲ ಪತಿನಿಷ್ಠೆ, ಅಸಾಮಾನ್ಯ ತ್ಯಾಗ, ವಾತ್ಸಲ್ಯಭಾವನೆ, ಪ್ರೀತಿ, ಭಕ್ತಿ, ಕೋಪ-ತಾಪ, ಲೋಭ, ಕಪಟ, ಅಸೂಯೆ, ಈರ್ಷೆ ಈ ಬಗೆಯ ಮಾನವಸ್ವಭಾವಧರ್ಮಗಳು ಅಲ್ಲಲ್ಲಿ ಪ್ರತಿಬಿಂಬಿತವಾಗಿವೆ. ಉಚ್ಚಧ್ಯೇಯವನ್ನಿಟ್ಟುಕೊಂಡಂಥ ರಾಮ, ಲಕ್ಷ್ಮಣ, ಸೀತೆ, ಹನುಮಂತ ಮುಂತಾದ ಕರ್ತವ್ಯನಿಷ್ಠರು ಇದ್ದಾರೆ. ಇವರ ಜೀವನೋದ್ದೇಶವು ಮಹಾ ಶ್ರೇಷ್ಠವಾದದ್ದು. ಸಾಮಾನ್ಯ ಜನರಿಗಿಂತ ಅವರು ಬೇರೆಯಾಗಿ ಎದ್ದುಕಾಣುತ್ತಾರೆ; ಅವರ ಅದರ್ಶಗಳೇ ಇದಕ್ಕೆ ಕಾರಣವಾಗಿದೆ. ನಮ್ಮ ಅಳತೆಗೋಲಿನಿಂದ ಅವರನ್ನು ಅಳೆಯುವುದು ಸರಿಯಲ್ಲ; ಅವರು ಮಾನವರೇ ಅಹುದು; ಆದರೆ ಶ್ರೇಷ್ಠ ಮಟ್ಟದ ಮಾನವರು, ಮಹಾಮಾನವರು; ಆದರೆ, ಅತಿಮಾನವರಲ್ಲ, ದೈವಿಕ ಗುಣಗಳಿಂದ ಕೂಡಿದವರಲ್ಲ.
ರಾಮಾಯಣವು ಮಾನವನು ಮಾನವರಿಗಾಗಿ ಬರೆದ ಗ್ರಂಥ; ಮಾನವನ ಬದುಕು ಹೇಗಿದೆ? ಎಂದು ಹೇಳುವ ಬದಲು ಹೇಗಿರಬೇಕು? ಎಂದು ವಿವರಿಸುವ ಹೆಸರಾಂತ, ಶ್ರೇಷ್ಠ ಗ್ರಂಥವಾಗಿದೆ. ರಾಮಾಯಣದ ನಿರ್ಮೀತಿಯಲ್ಲಿ ಶಪಥ, ಶಾಪ, ವರ, ಆಶೀರ್ವಾದ, ಶಕುನಗಳು ಹೇರಳವಾಗಿವೆ. ವಾಲ್ಮೀಕಿಯು ತನ್ನ ಅಸಾಧಾರಣ ಪ್ರತಿಭೆಯಿಂದ, ಮನೋಹರವಾದ ಕಲ್ಪನಾವಿಲಾಸದಿಂದ, ಶಬ್ದ ಮಾಧುರ್ಯದಿಂದ, ಚೇತೋಹಾರಿ ಪಾಂಡಿತ್ಯದಿಂದ, ನಾರದನು ಹೇಳಿದ ಕಥೆಯನ್ನು ರಾಮಾಯಣವಾಗಿ ಬರೆದಿಟ್ಟು, ಅದನ್ನು ಅಜರಾಮರಗೊಳಿಸಿದ್ದಾನೆ. ರಾಮಾಯಣದ ಆಕರ್ಷಣೆಯು ಯುಗಯುಗಾಂತರಗಳು ಗತಿಸಿದರೂ ಕಡಿಮೆಯಾಗಲಾರದು. ರಾಮಾಯಣದಲ್ಲಿ ಶಾಪ-ವರಗಳನ್ನು ಬಹು ಕುಶಲತೆಯಿಂದ ಯೋಚಿಸಿರುವುದರಿಂದ ಅವು ಕಥೆಯಿಂದ ಬೇರ್ಪಡಿಸಲಾಗದ