ಎನ್ನಾನಂದಾಬ್ಧಿಯೇ ಎನ್ನನುಪಮಸುಧೆಯೇ ಎನ್ನ ಪುಣ್ಯಸ್ವರೂಪವೇ
ಎನ್ನಾಯುಃಪುಂಜವೇ ಎನ್ನಯ ಗತಿಮತಿಯೇ ಎನ್ನ ವಿಜ್ಞಾನಮೂರ್ತಿ
ಎನ್ನತ್ಯಾಶ್ಚರ್ಯವೇ ಎನ್ನತಿಶಯ ಗುರುವೇ ಎನ್ನ ಚೈತನ್ಯದಾಗೇ
ಎನ್ನ ಪ್ರಾಣೇಶ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೯೬ ‖
ನಿತ್ಯಜ್ಞಾನೈಕಮೂರ್ತೀ ಸುಖತರಪರಮಾನಂದ ಸರ್ವಜ್ಞ ಮೂರ್ತೀ
ನಿತ್ಯತ್ವಾಧಾರಮೂರ್ತೀ ನಿರವಯವಮಹಾಮೂರ್ತಿ ನಿರ್ಲೇಪಮೂರ್ತೀ
ನಿತ್ಯಪ್ರತ್ಯಕ್ಷಮೂರ್ತೀ ನಿಖಿಲಗುಣಗಣಾಧಾರ ನಿರ್ಮಾಯಮೂರ್ತೀ
ನಿತ್ಯಶ್ರೀಮೂರ್ತೀ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೯೭ ‖
ಬಿಡೆನೀಶಾ ನಿಮ್ಮ ಪಾದಾಬ್ಜಮನೆಲೆಲೆ ಬಿಡೆಂ ಸೀಳ್ದೊಡಂ ಪೋಳ್ದೊಡಂ ಪೊ-
ಯ್ದೊಡಮಂದಿಂದೆಂದುಮೆಂತು ಬಿಡೆನಭವ ಬಿಡೆಂ ಶಂಕರಾ ಮಾಣೆನಾಂ ಬ ಲ್-
ವಿಡಿದೆಂ ಮತ್ತತ್ತಮಿತ್ತಂ ಚಲಿಯಿಸದೆಲೆ ಮತ್ಸ್ವಾಮಿ ನಿಮಾಜ್ಞೆಯಿಂದಂ
ಮೃಡನೇ ಭಕ್ತಾರ್ಥಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೯೮ ‖
ಕರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಭರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಹರ್ತಾರಂ ನೀನೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ
ಕೂರ್ತಿ೦ತೋರಂತೆ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೯೯ ‖
ಭರದಿಂ ಕೇಳ್ದೋದುವಾನಂದದೊಳತಿಶಯದಿಂ ಮಚ್ಚಿ ಲಾಲಿಪ್ಪವರ್ಗಾ-
ದರದಿಂ ನಿತ್ಯಾಯುವಂ ಸಂಪದವನಭವನೀಯುತ್ತುಮಿರ್ಕೆಂದನೂನಂ
ಧರೆಯೊಳ್ ಕೈಕೊಂಡು ರಕ್ಷಾಶತಕವನೊಲವಿಂ ಪ್ರೇಮದಿಂ ನಚ್ಚಿ ಪೇಳ್ದಂ
ಹರಿದೇವಂ ದೇವ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೧೦೦
‖
***