ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
87

ಮ್ಲಾನವದನರಾಗಿ, ಅಶ್ರುಲೋಚನರಾಗಿ, ನಟ್ಟಿರುಳಿನಲ್ಲಿ ಒಬ್ಬರೇ ಹೊರಟರು... ಸಂಗಮೇಶ್ವರನ ಸನ್ನಿಧಿಗೆ ಬಂದರು. ಆತನ ಎದುರಿನಲ್ಲಿ ಗದ್ಗದಕಂಠರಾಗಿ ಅವರು:

“ನಾನಾ ಭವದುಃಖದಲ್ಲಿ ಹುಟ್ಟಿದ ಪ್ರಾಣಿಯನಿಲ್ಲಿಗೆ ತಂದೆ.
ಇನ್ನು ಹುಟ್ಟಲಾರೆನು, ಹೊಂದಲಾರೆನು.
ಜನನಮರಣವೆಂಬುದಕ್ಕೆ ಹೊರಗಾದೆನಯ್ಯಾ !
ನೀವು ಹೇಳಿದ ಮಣಿಹವ ಮಾಡಿದೆ.
ಇನ್ನು ನಿಮ್ಮೊಳಗೆ ಕೂಡಿಕೊಳಾ ಕೂಡಲಸಂಗಮದೇವ !
ತೆರಪುಗೊಡು ತಂದೆ ಬಂದಿಹೆನು ಬಸವನು ನೊಂದೆ!೨೬

ಎಂದು ಅನನ್ಯಭಾವದಿಂದ ಸಂಗನನ್ನು ಬೇಡಿಕೊಂಡರು. ಆಗ,

ಸಂಗಮದೇವ ಬಸವನ ನಿರೀಕ್ಷಿಸುತ
ತೆರಹ ತನ್ನೊಳು ಕೊಟ್ಟು ಬಸವನಂ ಸೈಪಿಟ್ಟು
ನೋಡುತಿರೆ ಭಕ್ತರೆಲ್ಲರ ಮುಂದೆ ಬಸವಣ್ಣ
ಗಾಢದಿಂ ಶಿವನೊಳಗೆ ಬೆರೆತು ತಾ ಬಯಲಾದ !

ಈ ಬಗೆಯಾಗಿ ಬಸವಣ್ಣನವರು ಮಹಾಸಮಾಧಿಯನ್ನು ಪಡೆದರು. ಅವರು ಕೈಲಾಸವನ್ನೈದಿದ ವಾರ್ತೆಯು ಭಕ್ತರಿಗೆಲ್ಲ ಸಿಡಿಲಿನಂತೆ ಎರಗಿತು.

ಬಸವಣ್ಣ ! ನೀವು ಮರ್ತ್ಯಕ್ಕೆ ಬಂದು ನಿಂದರೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆ ಪಸರಿಸಿತಯ್ಯಾ.
ಸ್ವರ್ಗ-ಮರ್ತ್ಯ-ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳುವಿಗೆಯ ಘನವನಾರು ಬಲ್ಲರು?
ಅಣ್ಣಾ ! ಶಶಿಧರನ ಮಣಿಹವು ಪೂರೈಸಿತೆಂದು
ನೀವು ಲಿಂಗೈಕ್ಯವಾದರೆ,
ನಿಮ್ಮೊಡನೆ ಭಕ್ತಿ ಹೋಯಿತಯ್ಯಾ.


೨೬. ಭ.ಬ. ಪು. ೧೪೯-೧೫೦