ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
125

ಮಾಡಿದಾಗಲೇ ಭಕ್ತಿಯು ಸಫಲವಾಗುವುದು. ಇಲ್ಲದಿದ್ದರೆ ಅದು ಫಲಿಸಲಿಕ್ಕಿಲ್ಲ ಎಂದು ಅವರು ಪದೇ ಪದೇ ಸಾರಿರುವರು :

ಆಡಿದರೇನೋ, ಹಾಡಿದರೇನೋ, ಓದಿದರೇನೋ
ತ್ರಿವಿಧ ದಾಸೋಹವಿಲ್ಲದನ್ನಕ್ಕೆ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
ಮಾತಿನ ಮಾತಿನಲ್ಲಪ್ಪುದೆ ಭಕ್ತಿ?
ಮಾಡಿ ತನು ಸವೆಯದನ್ನಕ್ಕ
ಮನ ಸವೆಯದನ್ನಕ್ಕ
ಧನ ಸವೆಯದನ್ನು ಅಪ್ಪುದೇ ಭಕ್ತಿ?
ಕೂಡಲಸಂಗಮದೇವ, ಎಲುದೋರಿ ಸರಸವಾಡುವದನು
ಸೈರಿಸದನ್ನಕ್ಕ ಅಪ್ಪುದೇ ಭಕ್ತಿ?
ತನುವ ಕೊಟ್ಟು ಗುರುವನೊಲಿಸಬೇಕು
ಮನವ ಕೊಟ್ಟು ಲಿಂಗವನೊಲಿಸಬೇಕು.
ಧನವ ಕೊಟ್ಟು ಜಂಗಮನೊಲಿಸಬೇಕು.
ಈ ತ್ರಿವಿಧ ಹೊರಗುಮಾಡಿ, ಹರೆಯ ಹೊಯಿಸಿ,
ಕುರುಹ ಪೂಜಿಸುವರ ಮೆಚ್ಚ ಕೂಡಲಸಂಗಮದೇವ.

ಆದರೆ ಈ ಭಕ್ತಿಯನ್ನು ತೋರಿಕೆಗಾಗಿ ಮಾಡಕೂಡದು, ಮನಸ್ಸಿನಿಂದ ಮಾಡಬೇಕು:

ಮಾಡಿ ನೀಡಿ ಲಿಂಗವ ಪೂಜಿಸಿಹೆನು!
ಎಂಬುವರು ನೀವೆಲ್ಲ ಕೇಳಿರಣ್ಣಾ!
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವವನಂತೆ
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲಾ!