ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

10

ಅಳಿಯುವಂತಹದು, ಅನುಭಾವವು ಕೊನೆಯವರೆಗೆ ಉಳಿಯುವಂತಹುದು. ಆದುದರಿಂದ 'ನಿಜವಾದ ಅನುಭಾವಿಗಳು ಮತದಲ್ಲಿ ಹುಟ್ಟಿದರೂ, ಅವರು ಅದರಲ್ಲಿಯೆ ಮಡಿಯುವದಿಲ್ಲ' (Real Mystics though born in a creed, don't die in it). ಅವರು ತಮ್ಮ ಭಕ್ತಿಯನ್ನು ಬೆಳೆಸಿ, ದಿವ್ಯ ಅನುಭಾವವನ್ನು ಗಳಿಸಿ, ಅದರ ಬಲದಿಂದ ಬೇಗನೆ ಮತದ ಸಂಕುಚಿತ ಎಲ್ಲೆ ಮೀರಿ, ಮತಾತೀತರಾಗುವರು. ಬಸವಣ್ಣನವರು ಅಂಥ ಅನುಭಾವಿಗಳು!

ಮೇಲಾಗಿ ಮತಪ್ರಸಾರದ ಎರಡು ಬಗೆಗಳಾದ ಪರಮತಖಂಡನ ಹಾಗೂ ಸ್ವಮತಮಂಡನಗಳಲ್ಲಿ ಖಂಡನವು ವಿಘಾತಕ, ಮಂಡನವು ವಿಧಾಯಕ. ಮಂಡನದಲ್ಲಿ ಸ್ವಮತಪ್ರೇಮವು ಪ್ರಧಾನವಾದರೆ, ಖಂಡನದಲ್ಲಿ ಪರಮತದ್ವೇಷವು ತುಂಬಿ ತುಳುಕುವದು. ಮಂಡನದ ಸಾಧನಗಳು ಉನ್ನತ ಬಾಳು, ಅನುಭಾವದ ಪ್ರಭಾವ ಹಾಗೂ ಒಲವಿನ ಸಂವಾದ. ಆದರೆ ಖಂಡನವು ಸಾಮಾನ್ಯವಾಗಿ ಸಾಗುವದು ವಿವಾದದಿಂದ, ವಿಡಂಬನದಿಂದ, ಹಿಂಸೆಯಿಂದ, ಖಂಡನದಿಂದ ಉಂಟಾಗುವದು ಅಸಹನ-ಕಲಹ-ಕೋಲಾಹಲ. ಅದರಿಂದ ಬಹುಕಾಲ ಉಳಿಯುವದು ಕಟುತರವಾದ ಕ್ರಿಯೆ-ಪ್ರತಿಕ್ರಿಯೆಗಳಷ್ಟೇ! ಆದುದರಿಂದ ಈ ಖಂಡನಾತ್ಮಕ ಮತಪ್ರಚಾರದಲ್ಲಿ ಅಂದಿನವರು ಆಸ್ಥೆವಹಿಸಿದ್ದರೂ ನಾವಿಂದು ಅದನ್ನು ಬಳಸಕೂಡದು. ಇಂದು-ಎಂದೆಂದೂ-ಬೇಕಾದುದು, ಶೀಲ-ಸೌಹಾರ್ದ-ಶಾಂತಿಗಳ ಬೆಳವಣಿಗೆ. ಅದಕ್ಕೆ ನಾವು ಬಳಸಬೇಕಾದುದು ಆತ್ಮೋದ್ಧಾರದ ಮಂಡನಾತ್ಮಕ ಸಾಧನವನ್ನು!

ಆದುದರಿಂದ ಬಸವಣ್ಣನವರು ತಮ್ಮ ಭಕ್ತಿಭಾಂಡಾರವನ್ನು ಹೇಗೆ ಗಳಿಸಿದರು, ಹೇಗೆ ಬೆಳೆಸಿದರು? ಅದರ ಫಲವಾಗಿ ಅವರು ಪರಮಾತ್ಮನ ಅನುಭಾವವನ್ನು ಹೇಗೆ ಪಡೆದರು? ಆತನಿಂದ ಪರಮಾನಂದವನ್ನು ಹೇಗೆ ಸವಿದರು? ಅದರಲ್ಲಿ ಅವರು ಹೇಗೆ ನಲಿದರು? ಈ ರೀತಿ ತಮ್ಮ ಬಾಳನ್ನು ಬೆಳಗಿಸಿ ಅವರು ಪರಿಸರದವರಿಗೆ ಹೇಗೆ ಆದರ್ಶಪುರುಷರಾದರು?