ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

ತಲೆಯನ್ನು ತಿನ್ನಹತ್ತಿತು. ದೇವನು ದಯಾಮಯನು. ಆತನು ಸಕಲ ಪ್ರಾಣಿಗಳನ್ನು ಪ್ರೀತಿಸುವನು! ರಕ್ಷಿಸುವನು! ಎಂಬುದನ್ನು ಬಸವಣ್ಣನು ಗುರುಹಿರಿಯರಿಂದ ಅನೇಕ ಸಲ ಅರಿತಿದ್ದನು. ಅದೇ ಮೇರೆಗೆ ಅಂಥ ಹಿರಿಯರೇ ಯಜ್ಞ ಯಾಗಾದಿಗಳಲ್ಲಿ ಪ್ರಾಣಿಹಿಂಸೆ ಮಾಡಿದುದನ್ನು ಕೇಳಿದ್ದನು. ಆದುದರಿಂದ ದಯಾಮಯನಾದ ಭಗವಂತನು ಪ್ರಾಣಿಗಳ ಕೊಲೆಯನ್ನು ಸಹಿಸಬಲ್ಲನೆ? ಅವುಗಳ ಬಲಿಯನ್ನು ಸೇವಿಸಬಲ್ಲನೆ? ಇಂಥ ಹಿಂಸಾಯುಕ್ತಯಾಗದಿಂದ ಭಗವಂತನ ಯೋಗ ಸಾಧ್ಯವೇ? ಎಂಬುದು ಆತನ ಎಳೆಹೃದಯವನ್ನು ಕದಡಿಸಿದ ಬೇರೊಂದು ಸಮಸ್ಯೆ. ಭಗವಂತನೇ ಜಗತ್ತಿನ ಜನಕ! ಆತನೇ ಎಲ್ಲರ ತಂದೆ, ತಾಯಿ! ಎಲ್ಲ ಜನ ಆತನ ಮಕ್ಕಳು! ಅಂದಮೇಲೆ ಅವರೆಲ್ಲ ಒಂದೇ ಬಳಗದವರು, ಬಂಧುಭಗಿನಿಯರು. ಹೀಗಿರಲು ಅವರಲ್ಲಿ ಮೇಲು ಕೀಳೆಂಬುದು ಎಲ್ಲಿಂದ ಬಂತು? ಈ ಸಮಸ್ಯೆಯು ಆತನನ್ನು ಕಾಡತೊಡಗಿತು.

ಬಸವಣ್ಣನು ಆಗಾಗ ಈ ಸಮಸ್ಯೆಗಳನ್ನು ಕುರಿತು ತನ್ನ ಗೆಳೆಯರೊಡನೆ ಚರ್ಚಿಸಿದ. ಅವನ್ನು ಕೆಲ ಹಿರಿಯರೆದುದು ಇರಿಸಿ, ಅವರಿಂದ ಅವುಗಳ ಪರಿಹಾರ ಪಡೆಯಲು ಯತ್ನಿಸಿದ. ಆದರೆ ಅವರಿಂದ ಅದು ಅವನಿಗೆ ಲಭಿಸಲಿಲ್ಲ. ಕೆಲವರು ಅವನನ್ನು ದಬಾಯಿಸಿದರು, ಕೆಲವರು ಛೇ ಹಾಕಿದರು. ಬೇರೆ ಕೆಲವರು, ಸತ್ಪುರುಷರಿಂದ ಅದನ್ನು ಪಡೆಯಲು ಬೋಧಿಸಿದರು. ಆದರೆ ಅನುಭಾವಿ ಸತ್ಪುರುಷರನ್ನಾದರೂ ಪಡೆಯುವದೆಲ್ಲಿ? ಪಡೆಯುವದು ಎಂತು? ಕೊನೆಗೆ ಬಸವಣ್ಣನು ವಾಡಿಕೆಯಂತೆ ಶಿವಾಲಯಕ್ಕೆ ಹೋಗಿ ಶಿವನ ಎದುರು ತನ್ನ ಹೃದಯವನ್ನು ತೆರೆದಿಟ್ಟನು:

ಏನಯ್ಯಾ! ವಿಪ್ರರು ನುಡಿದಂತೆ ನಡೆಯರು. ಇದೆಂತಯ್ಯಾ!
ತಮಗೊಂದು ಬಟ್ಟೆ! ಶಾಸ್ತ್ರಕ್ಕೊಂದು ಬಟ್ಟೆ!
ನೀರ ಕಂಡ ಮುಳುಗುವರಯ್ಯಾ!
ಮರನ ಕಂಡ ಸತ್ತುವರಯ್ಯಾ!
ಬತ್ತುವ ಜಲವನೊಣಗುವ ಮರನ ಮೆಚ್ಚಿದವರು
ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವಾ!