ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

66
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನ್ನು ಒಂದೆ ಎಂಬೆ !
ಈ ಹೀಗೆಂದು ನಂಬುವದೆನ್ನ ಮನ.
ಈ ನುಡಿದ ನುಡಿಯೊಳಗೆ,
ಎಳ್ಳ ಮೊನೆಯಷ್ಟು ಸಂದೇಹವುಳ್ಳರೆ,
ಹಲುದೋರಿ ಮೂಗ ಕೊಯಿ ಕೂಡಲಸಂಗಮದೇವಾ.

ಬಸವಣ್ಣನವರ ಈ ಸಮತೆಯ ಸಂದೇಶವು ಮೇಲಿನವರ ಅಹಂಕಾರವನ್ನು ಖಂಡಿಸಿತು, ಕೆಳಗಿನವರಲ್ಲಿ ನವಚೈತನ್ಯವನ್ನು ಬೀರಿತು. ಅದೇ ಮೇರೆಗೆ ಅದು ಮಹಿಳೆಯರಲ್ಲಿಯೂ ನೂತನ ಉತ್ಸಾಹವನ್ನು ಹುಟ್ಟಿಸಿತು. ಅದರ ಫಲವಾಗಿ, ಅವರಲ್ಲಿ ಅನೇಕರು ಬಸವಣ್ಣನವರ ಮಹಾಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿದರು. ಹಿರಿಯ ಶರಣರಂತೆ, ಶರಣೆಯರೂ ಮತಪ್ರಸಾರದ ಕಾರ್ಯವನ್ನು ತುಂಬ ಉತ್ಸಾಹದಿಂದ ಮಾಡಿದರು. ಮಹಿಳೆಯರಲ್ಲಿನವಜಾಗೃತಿಯನ್ನು ಉಂಟು ಮಾಡಿ ಅವರಿಗೆ ನವಸಂಸ್ಕೃತಿಯನ್ನು ಸಲ್ಲಿಸಿದರು.

ತಮ್ಮ ಸಮತೆಯ ಸಂದೇಶವನ್ನು ಸಲ್ಲಿಸುವಾಗ, ಬಸವಣ್ಣನವರು 'ಕುಲ' ಮದವನ್ನು ಕಠೋರವಾಗಿ ಖಂಡಿಸಿದರು. ಶೀಲದಿಂದಲೇ ಕುಲಕ್ಕೆ ಬೆಲೆ, ಶೀಲದಲ್ಲಿಯೇ ಕುಲದ ಬಲ, ಕುಲಕ್ಕೆ ಹಿರಿಮೆ ಬಂದುದು ಶೀಲದಿಂದ, ಶೀಲವೇ ಅಳಿದಾಗ ಕುಲಕ್ಕೆ ಬೆಲೆಯೇನು? ಇಂಥ ಶೀಲವಳಿದ ಕುಲದ ಹಮ್ಮನ್ನು ಬಸವಣ್ಣನವರೂ ಬೇರೆ ಸಂತರೂ ಹಳಿದಿರುವರಲ್ಲದೆ ನಿಜವಾದ ಕುಲೀನತೆಯನ್ನಲ್ಲ ಎಂಬುದನ್ನು ನೆನೆಯಬೇಕು. ಇದನ್ನು ಅವರು ಮುಂದಿನ ವಚನದಲ್ಲಿ ಅರುಹಿರುವರು:
ಕೊಲುವನೇ ಮಾದಿಗ ಹುಸಿವನೇ ಹೊಲೆಯ
ಕುಲವೇನೋ ? ಅಂದಂದಿನ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು ?