ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
75

ಬಿರುಗಾಳಿ ಬೀಳಿ, ಮರ ಮುರಿದಂತೆ,
ಸುಳುವ ಸುಳಿಯದೆ,
ತಂಗಾಳಿ ಪರಿಮಳದೊಡಗೂಡಿ
ಸುಳಿವಂತೆ ಸುಳಿಯಬೇಕು !
ಸುಳಿದಡೆ ನೆಟ್ಟನೆ ಜಂಗಮವಾಗಿ ಸುಳಿಯಬೇಕು.
ಸುಳಿಯದಡೆ ನೆಟ್ಟನೆ ಭಕ್ತನಾಗಿ ನಿಲಬೇಕು.
ಸುಳಿದು ಜಂಗಮವಾಗಲರಿಯದ,
ನಿಂದು ಭಕ್ತನಾಗಲರಿಯದ
ಉಭಯಭ್ರಷ್ಟರೇನೆಂಬೆ ಗುಹೇಶ್ವರಾ? .

ಜನರನ್ನುದ್ಧರಿಸಲೆಳಸುವ ಶರಣನು ಅವರೊಡನೆ ಯಾವ ಬಗೆಯಾಗಿ ಮಾತು ಆಡಬೇಕೆಂಬುದನ್ನು ಬಸವಣ್ಣನವರು ಈ ರೀತಿ ಬೋಧಿ ಸಿರುವರು :

ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು.
ನುಡಿದರೆ ಲಿಂಗ ಮೆಚ್ಚಿ 'ಅಹುದಹುದೆ' ನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ,
ಕೂಡಲಸಂಗಮದೇವನೆಂತೊಲಿವನಯ್ಯಾ?
ದಿಟವ ನುಡಿವುದು, ನುಡಿದಂತೆ ನಡೆವುದು
ಇದೇ ಅಂತರಂಗಶುದ್ದಿ ಇದೇ ಬಹಿರಂಗಶುದ್ಧಿ,

ಜಂಗಮರು ಭಕ್ತರನ್ನು ಕಾಡಕೂಡದು, ಬೇಡಕೂಡದು, ಭಕ್ತರು ಬೇಡದಲೆ ನೀಡಬೇಕು, ಆಡದಲೆ ನೀಡಬೇಕು, ನೀಡಿದೆನೆಂಬುದು ಮನದಲ್ಲಿ ಮೂಡದೇ ನೀಡಬೇಕು. ಇಂಥವರೇ ನಿಜವಾದ ಆದರ್ಶ ಭಕ್ತರು. ನಿಜವಾದ ಆದರ್ಶ ಜಂಗಮರು. ಇಂಥವರೇ ಜನರನ್ನು ಉದ್ಧರಿಸಬಲ್ಲರು.