ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

80

ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿ, ಅದನ್ನು ದಿನಾಲು ಭಕ್ತಿಭಾವದಿಂದ ಪೂಜೆ ಮಾಡಿ, ಅದರ ಜತೆಯಲ್ಲಿ ಗುರು- ಜಂಗಮರಿಗೆ ತನುಧನಗಳನ್ನು ಅರ್ಪಿಸಿ, ಅವರನ್ನು ಆರಾಧಿಸಿ, ಪಾದೋದಕ-ಪ್ರಸಾದಗಳನ್ನು ಸೇವಿಸಬೇಕು. ವಿಭೂತಿ- ರುದ್ರಾಕ್ಷಿಗಳನ್ನು ಧರಿಸಿ, ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದೇ ಭಕ್ತರ ನಿತ್ಯಾಚಾರ. ಅದರ ಕೂಡ ಯಮನಿಯಮಗಳ ಸದಾಚಾರವನ್ನೂ ಸತ್ಯಧರ್ಮರಕ್ಷಣೆಯ ಗಣಾಚಾರವನ್ನೂ ಶರಣರನ್ನೂ ಸತ್ಕರಿಸುವ ಶಿವಾಚಾರವನ್ನೂ ಲಿಂಗಾರ್ಚನೆಯ ಲಿಂಗಾಚಾರವನ್ನೂ ಅವರು ತಪ್ಪದೇ ಪಾಲಿಸಬೇಕು. ಇವು ವೀರಶೈವರೆಲ್ಲರೂ ಅನುಸರಿಸಬೇಕಾದ, ಆಚರಿಸಬೇಕಾದ ಮಾತುಗಳು.

ಮುಂದೆ ಭಕ್ತರು ಪರಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸಿದರೆ, ಅವರು ಷಟ್‌ ಸ್ಥಲಸಿದ್ಧಾಂತವನ್ನು ಚೆನ್ನಾಗಿ ಅರಿತುಕೊಂಡು, ಅದರ ಮೇರೆಗೆ ಸಾಧನದಲ್ಲಿ ನಿರತರಾಗಬೇಕು. ತನ್ನಲ್ಲಿ ಭಕ್ತಿಭಾವವನ್ನು ತಳೆದ ಭಕ್ತನು, ನಿಷ್ಠೆಯನ್ನು ಬೆಳೆಸಿದರೆ ಮಾಹೇಶನಾಗುವ ತಾನು ಸೇವಿಸುವದೆಲ್ಲವೂ ಪರಶಿವನ ಪ್ರಸಾದವೆಂದು ಬಗೆದು, ಆ ಬಗೆಯ ಅವಧಾನದಲ್ಲಿ ನಿಲ್ಲುವವನು ಪ್ರಸಾದಿಯು. ತರುವಾಯ ಆತನು ಅಂತರಂಗದಲ್ಲಿ ಜ್ಯೋತಿರ್ಲಿಂಗದ ಅನುಭಾವವನ್ನು ಪಡೆದು ಪ್ರಾಣಲಿಂಗಿಯಾಗುವನು. ಈ ಅನುಭಾವಜನಿತ ಆನಂದದಲ್ಲಿ ಮುಳುಗಿ, ಪರಶಿವನಿಗೆ ತನ್ನನ್ನೇ ಅರ್ಪಿಸಿಕೊಂಡವನು ಶರಣನು. ಮತ್ತು ಆತನಲ್ಲಿ ಸಮರಸನಾದವನು ಐಕ್ಯನು, ಪರಮಾರ್ಥಸಾಧನವನ್ನು ಮಾಡತೊಡಗಿದ ಭಕ್ತನು ಈ ಆರು ಮೆಟ್ಟಿಲುಗಳನ್ನು ಏರಿ, ಪರಶಿವನಲ್ಲಿ ಬೆರೆತು ಬೇರಿಲ್ಲದಂತೆ ಆಗುವದು, ವೀರಶೈವಪಂಥದ ಚರಮಸ್ಥಿತಿ, ಅವಸ್ಥೆ.

ಪ್ರಭುದೇವ- ಚೆನ್ನಬಸವರು ಜಂಗಮರ ಮುಖಾಂತರ ಈ ಸಿದ್ಧಾಂತಗಳನ್ನು ದೇಶದಲ್ಲೆಲ್ಲ ಪ್ರಚುರಗೊಳಿಸಿದರು. ಈ ವಿರಕ್ತಜಂಗಮರ ಕಾರ್ಯದಲ್ಲಿ ನೆರವನ್ನು ನೀಡಲು ಅವರು ಕೆಲವು ದೊಡ್ಡ ಗ್ರಾಮಗಳಲ್ಲಿ