ಪುಟ:ಸಂತಾಪಕ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಕರ್ಣಾಟಕ ಚ೦ದ್ರಿಕೆ.


ಸುಂದರಿಯೇ ಆಗಿದ್ದಪಕ್ಷದಲ್ಲಿ ಅವಳಿಗಿಂತ ಇವಳು ಅತ್ಯಂತ ಸೌಂದರ್ಯ
ಶಾಲಿನಿಯೆಂದು ನಿಸ್ಸಂದೇಹವಾಗಿ ಹೇಳಬಲ್ಲೆವು. ಸಾವಿರವೇಕೆ ? ನಮ್ಮ
ಪುರುಷಪಾಠಕರು ಅವಳ ಸೌಂದರ್ಯವನ್ನು ಕಣ್ಣಾರೆ ಕಂಡಿದ್ದರೆ ಓದುವು
ದನ್ನು ಇಲ್ಲಿಗೇ ನಿಲ್ಲಿಸಿ ಈ ಪುಸ್ತಕವನ್ನು ಬಿಸಾಟುಬಿಡುತ್ತಿದ್ದರು.
ಯುವತಿಯು ಏನನ್ನೋ ಆಲೋಚಿಸುತ್ತೆ ಕುಳಿತಿದ್ದಳು. ಅವಳ
ಕೇಶದಾಮವು ಪಲ್ಲವಾಸ್ತರಣದಮೇಲೆ ಬಿದ್ದು ಅದನ್ನು ಚುಂಬಿಸಿ ಕ್ರೀಡಿ
ಸುತ್ತಲಿದ್ದಿತು. ಅವನತಶೀರ್ಷೆಯಾಗಿದ್ದ ಸುಂದರಿಯು ತಟ್ಟನೆ ತಲೆಯೆತ್ತಿ
ನೋಡಿದಳು. ಇದಿರಾಗಿದ್ದ ರಸಾಲವೃಕ್ಷದಮೇಲೆ ಒಂದು ಶಾರಿಕೆಯು
ಕುಳಿತುಕೊಂಡು ನಾಲ್ಕು ದಿಕ್ಕುಗಳನ್ನೂ ನೋಡುತ್ತಿದ್ದಿತು. ಯುವತಿಯ
ದೃಷ್ಟಿಯು ಈ ಶಾರಿಕೆಯ ಮೇಲೆ ನೆಲೆಗೊಂಡಿತು. ಯುವತಿಯು ನೋಡು
ತ್ತಿದ್ದಹಾಗೆಯೇ ಒಂದು ಶುಕವು ಹಾರಿಬಂದು ಈ ಹೆಣ್ಣುಗಿಳಿಯ ಸಮೀಪ
ದಲ್ಲಿ ಕುಳಿತುಕೊಂಡಿತು. ಹೆಣ್ಣುಗಿಳಿಯು ಶುಕದ ಆಗಮನದಿಂದ ತನಗೆ
ಬಹುಸಂತೋಷವುಂಟಾಯಿತೆಂಬ ಭಾವವನ್ನು ದೃಷ್ಟಿಯಿಂದ ತೋರ್ಪಡಿಸಿ
ಅದರ ಬಾಯಲ್ಲಿದ್ದ ರಸಾಲಫಲವನ್ನು ತನ್ನ ಕೊಕ್ಕಿನಿಂದ ಕಚ್ಚಿ ತೆಗೆದು
ಕೊಂಡಿತು. ಶುಕವು ಹೆಣ್ಣುಗಿಳಿಯ ಬಾಯಲ್ಲಿದ್ದ ಆ ಹಣ್ಣನ್ನು ಮತ್ತೆ
ತನ್ನ ಕೊಕ್ಕಿನಿಂದ ಕಚ್ಚಿ ತೆಗೆದುಕೊಂಡಿತು. ಶಾರಿಕೆಯು ಮತ್ತೆಹಾಗೆಯೇ
ಮಾಡಿತು. ಅದರ ಸಮೀಪದಲ್ಲಿದ್ದ ಮತ್ತೊಂದು ಸಣ್ಣಕೊಂಬೆಯಮೇಲೆ
ಇನ್ನೊಂದು ಶಾರಿಕೆಯು ಬಂದು ಕುಳಿತುಕೊಂಡಿತು. ಶುಕವು ಅದನ್ನು
ಕಂಡು ತಾನು ಕುಳಿತಿದ್ದ ಸ್ಥಳವನ್ನು ಬಿಟ್ಟು ಅದರಬಳಿಗೆ ಹಾರಿಹೋಗಿ
ಕುಳಿತುಕೊಂಡಿತು. ಇದರ ಆಗಮನದಿಂದ ಅಸಂತುಷ್ಟವಾದ ಆ ಹೊಸ
ಶಾರಿಕೆಯು ತತ್‌ಕ್ಷಣವೇ ಹಾರಿಹೋಯಿತು. ಶುಕವು ನಿರಾಶೆಯನ್ನು
ಹೊಂದಿ ಮೊದಲು ತಾನಿದ್ದಸ್ಥಳಕ್ಕೆ ಹಾರಿಬಂದಿತು. ಇಲ್ಲಿದ ಶಾರಿಕೆಯು
ಕೋಪದಿಂದ ಶುಕವನ್ನು ನೋಡದೆ ಮತ್ತೊಂದು ಪಾರ್ಶ್ವಕ್ಕೆ ತಿರುಗಿತು.
ಶುಕವೂ ಅತ್ತಕಡೆ ತಿರುಗಿತು. ಶಾರಿಕೆಯು ತನ್ನ ಬಾಯಲ್ಲಿದ್ದ ಫಲವನ್ನು
ಕೆಳಕ್ಕೆ ಕೆಡವಿಬಿಟ್ಟಿತು. ಶುಕವು ಅದನ್ನು ಕಚ್ಚಿಕೊಂಡು ಬಂದು ಮತ್ತೆ
ಅದರ ಬಳಿಯಲ್ಲಿ ಕುಳಿತುಕೊಂಡಿತು: ಶಾರಿಕೆಯು ಬೇಸರಗೊಂಡು ಹಾರಿ
ಹೋಯಿತು. ಶುಕವೂ ಅದರ ಹಿಂದೆಯೇ ಹಾರಿಹೋಯಿತು.