ಏಕಾದಶ ಪರಿಚ್ಛೇದ
(ಆನಂದಸಾಮ್ರಾಜ್ಯ)
ಇಂದು ವಿನೋದನ ಸೌಭಾಗ್ಯಲಕ್ಷ್ಮಿ, ಪುನರುಜ್ಜೀವಿಸಿರುವಳು. ಸುಜ್ಞಾನಶರ್ಮನ ಮನೆಯೊಳಗಡೆಯ ಕಿರುಮನೆಯಲ್ಲಿ ಮಂಚದಮೇಲೆ, ಸತೀಮಣಿ ಸುಶೀಲೆ ಕುಳಿತಿರುವಳು. ಪತ್ನಿಯ ಪಕ್ಕದಲ್ಲಿಯೇ, ಅವಳ ಸಾಕಾರಬ್ರಹ್ಮಸ್ವರೂಪನಾದ ವಿನೋದನು ಕುಳಿತು ಪತ್ನಿಯ ಕೊರಳ ಮೇಲೆ ತನ್ನ ಎಡದತೋಳನ್ನಿರಿಸಿ, ಬಲಗೈಯಿಂದ ಸುಶೀಲೆಯ ಗಲ್ಲವನ್ನು ಮೇಲಕ್ಕೆತ್ತಿ, "ಪ್ರಿಯೆ ! ಕ್ಷಮಿಸಲಾರೆಯ? ನನ್ನ ಅಪರಾಧಗಳೆಲ್ಲವನ್ನೂ ಕ್ಷಮಿಸಿ, ಕಟಾಕ್ಷಿಸಿಲೊಲ್ಲೆಯಾ?" ಎಂದು ಪ್ರಾರ್ಥಿಸುತ್ತಿರುವನು.
ಪ್ರಿಯ ಸೋದರೀ ಸೋದರರೇ !
ಕಾಲಪುರುಷನ ವಿಚಿತ್ರಗತಿಯೇ ಹೀಗಲ್ಲವೆ ? "ದೈವೀ ವಿಚಿತ್ರಾಗತಿಃ" ಎಂಬುದಕ್ಕೆ ಇಷ್ಟೇ ಸಾಲದೆ ? ಲೀಲಾನಂದ ವಿಭೂತಿಯನ್ನೊಳಗೊಂಡಿರುವ ಭಗವನ್ಮಾಯೆಯೂ ಇದೇ ಅಲ್ಲವೆ ? ಈ ಮಾಯೆಯಲ್ಲಿಯೇ ನಾವೆಲ್ಲರೂ ನಲಿನಲಿದಾಡುತ್ತಿರುವೆವೆಂದರೆ ಸಾಕಲ್ಲವೇ ? ಹಾಗಲ್ಲವೆಂದರೆ, ಅವಮೂರ್ತಿಯ ದರ್ಶನ, ಸ್ಪರ್ಶನ, ಸಂಭಾಷಣಾ ಕ್ರಿಯೆಗಳು ವಿನೋದನಿಗೆ ಯಾತನಾರೂಪಗಳಾಗಿ ಪರಿಣಮಿಸಿದ್ದುವೋ ಅದೇ ಮೂರ್ತಿಯೇ ಆ ರಮಣೀಮೂರ್ತಿಯೇ ಈಗ ಆತನ ಹೃದಯದಲ್ಲಿ ಸರ್ವಾಧಿಕಾರವನ್ನೂ ವಹಿಸಿ, ವರಪ್ರದಾನಕ್ಕೆ ಸಂಪ್ರಾರ್ಥಿಲ್ಪಡುತ್ತಿರುವುದೆಂದರೆ ನೀವೇನು ಹೇಳುವಿರಿ ? ಆಗಲಿ, ವಿನೋದ !