ಪುಟ:ಸ್ವಾಮಿ ಅಪರಂಪಾರ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೨ ಸ್ವಾಮಿ ಅಪರಂಪಾರ

  "ಹಾಗಾ?ಇನ್ನು ವಿಲಂಬ ಬೇಡ.ಹೊರಡೋಣ."
  ...ಹಗಲು ದಾರಿ ನಡೆದು ಕಾವೇರಿ ನದಿಯನ್ನು ಅವರಿಬ್ಬರೂ ಸಮೀಪಿಸಿದಾಗ, ಸಿದ್ಧಲಿಂಗನೆಂದ:
  "ಸಾಮಿಯವರೆ,ಇದೇ ತಾಣ.ನೆಪ್ಪದೆಯಾ?ನಾವು ಮೊದಲ ಸಲ ಸಂಧಿಸಿ ಹದಿನಾಲ್ಕು ವರ್ಷ ಸಂದದೆ,ಅಲ್ಲವಾ?"
  "ಹ್ಞ,ಅಯ್ಯನವರೆ!ಆಗ,ನಂಜರಾಜಪಟ್ಟಣದ ಸ್ಥಳ ಪುರಾಣ ಹೇಳಿದಿರಿ.ಇಲ್ಲಿ,ಈ ಜಾಗದಲ್ಲೇ, ನಾವು ನದಿ ದಾಟಿದಿವಿ...ಪೂರ್ವ ಜನ್ಮದ ಕಥೆ. ಆದರೂ ನೆನಪದೆ."
  ಅವರು ಮೌನವಾಗಿ ನದಿಯನ್ನು ದಾಟಿದರು.ಕೈಕಾಲು ಮುಖಗಳಿಗೆ ನೀರು ಹನಿಸಿದರು. ಮೆಟ್ಟಲುಗಳನ್ನು ಕಸಕಡ್ಡಿಗಳೂ ತರಗೆಲೆಗಲೂ ಆವರಿಸಿದ್ದುವು.ಮುಚ್ಚಂಜೆಯ ಹೊತ್ತು. ಆದರೂ ಘಂಟೆಗಳ ಸದು ಕೇಳಿಬರುತ್ತಿರಲಿಲ್ಲ.ಮೌಢ್ಯ ಕವಿದಂತೆ ಪಟ್ಟಣ ಮೌನವಾಗಿತ್ತು. 
  ಪಾವಟಿಗೆಗಳನ್ನೇರುತ್ತ ಸಿದ್ಧಲಿಂಗನೆಂದ:
  "ಯಾಕೋ ಎಡಗಣ್ಣು ಅದರತಿದೆ, ಸ್ವಾಮಿಯವರೆ."
  ಅಪರಂಪಾರನಿಗೂ ಇಂತಹದೇ ಎಂದು ಹೇಳಲಾಗದ ಕಸಿವಿಸಿ ಮನದೊಳಗೆ.
  "ರಾಹುಗ್ರಸ್ತ ಕೊಡಗು.ಅನಿಷ್ಟಗಳು ಇದ್ದೇ ಇರತವೆ,ಸಿದ್ಧಲಿಂಗ.”
  ದೇಗುಲಗಳ ಆವರಣ ನಿರ್ಜನವಾಗಿತ್ತು.ಅಪರಂಪಾರನೂ ಸಿದ್ಧಲಿಂಗನೂ ವೀರಭದ್ರ-ನಂಜುಂಡೇಶ್ವರರಿಗೆ ನಮಿಸಿದರು.ಬಸವನ ಪಾದ ಮುಟ್ಟಿದರು.ಇನ್ನು ಮಠದ ಕಡೆಗೆ ಅವರು ಹೆಜ್ಜೆ ಇಡಬೇಕು ಎನ್ನುವಷ್ಟರಲ್ಲೆ,ಹಾವುಗೆಗಳ ಸಪ್ಪಳವಾಯಿತು.ಬರುತ್ತಲಿದ್ದುದು ಗುರುಶಿಷ್ಯ ಪಂಚಾಕ್ಷರಿ, ಅರ್ಚನೆಗೆಂದು, ಪೂಜಾಸಾಮಗ್ರಿಗಳೊಡನೆ.
  ಬಂದವರನ್ನು ನೋಡಿ ಅವನೆಂದ:
  "ಸಿದ್ದಲಿಂಗನಾ?ಇವರು-ಇವರು-ಅಪರಂಪಾರ ಅಲ್ಲವಾ?ಗುರುಗಳಿಗೆ ದೇಹಾಲಸ್ಯ. ಮಲಗಿಕೊಂಡಿದ್ದಾರೆ. ಈ ಎರಡು ದಿವಸದಿಂದ ನಿಮ್ಮಿಬ್ಬರನ್ನೂ ಜ್ಞಾಪಿಸಿಕೋತಾ ಆದಾರೆ. ನೇರ ಹೋಗಿ.ಪೂಜೆ ಮುಗಿಸಿಕೊಂಡು ನಾ ಬರತೇನಿ."
  "ಶಿವ.ಶಿವ" ಎಂದ ಸಿದ್ಧಲಿಂಗ.ಅಪರಂಪಾರನೂ ಕಳವಳಕ್ಕೆ ಗುರಿಯಾದ.ಒಮ್ಮೆಲೆ ಭಾರವಾಗಿ ಕಂಡ ಪಾದಗಳನ್ನು ಪ್ರಯತ್ನಪೂರ್ವಕವಾಗಿ ಬೇಗಬೇಗನೆ ಎತ್ತಿ ಇಡುತ್ತ ಅವರು ಮಠವನ್ನು ತಲಪಿದರು.
  ಪಲ್ಲಂಗದ ಮೇಲೆ ಶಿವಾಚಾರ್ಯ ಸ್ವಾಮಿಗಳು ಮಲಗಿದ್ದರು.ಮಿಸುಕುತ್ತಿದ್ದ ಕಣ್ಣೆವೆಗಳು ಅವರು ನಿದ್ರಾಧೀನರಾಗಿಲ್ಲವೆಂದು ಸಾರುತ್ತಿದ್ದುವು.
  ಆರ್ತತೆ ತುಂಬಿದ ಧ್ವನಿಯಲ್ಲಿ ಸಿದ್ಧಲಿಂಗನೆಂದ:
  "ಗುರುಗಳೆ,ಗುರುಗಳೇ !" ಶಿವಾಚಾರ್ಯ ಸ್ವಾಮಿಗಳು ಕಣ್ಣು ತೆರೆದು ನೋಡಿದರು. ಅವರ ಮ್ಲಾನಮುಖದ ಮೇಲೆ ಮಂದಹಾಸ ಮಿಂಚಿತು. ಪಾದಮುಟ್ಟಿದವರನ್ನು ಆಶೀರ್ವದಿಸಲೆಂದು ಅವರ ಬಲ ಅಂಗೈ ಮೇಲಕ್ಕೆ ಚಲಿಸಿತು. ತುಟಿಗಳು ಅಲುಗಿದುವು. ಅವರು ಏಳಲೆತ್ನಿಸಿದರು.
  "ಬೇಡಿ,ಬೇಡಿ"ಎಂದ ಅಪರಂಪಾರ.
  "ಸಿದ್ಧಲಿಂಗು, ಸ್ವಲ್ಪ ಹಿಡಿಯಪ್ಪ" ಎಂದರು ಸ್ವಾಮಿಗಳು.